ಕಡಬ: ಠಾಣಾ ವ್ಯಾಪ್ತಿಯ ಬಿಳಿನೆಲೆಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಸಂದೀಪ್ ಎಂಬವರ ಹತ್ಯೆಯಾಗಿದ್ದು, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದಾರೆ.
ವಿಷಯ ತಿಳಿದು ತುರ್ತಾಗಿ ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಕುರಿತು ಮಾತನಾಡಿರುವ ಕಿಶೋರ್ ಕುಮಾರ್ ಪುತ್ತೂರು ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಎಸ್.ಪಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೃತ್ಯದ ಕುರಿತು ತನಿಖೆ ನಡೆಸಿ ನಮ್ಮ ಕಾರ್ಯಕರ್ತನ ಹತ್ಯೆಯ ಹಿಂದಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಕಡಬ ಪರಿಸರದಲ್ಲಿ ಗಾಂಜಾ ಸಹಿತ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಅದರಲ್ಲಿ ಸಿಲುಕುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಾದಕವಸ್ತು ಮಾರಾಟ ಜಾಲವನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ರಾಜಕೀಯ ಒತ್ತಡಗಳಿಗೆ ಮಣಿಯದೆ ತನಿಖೆ ನಡೆಸಬೇಕು ಎಂದರು.
ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತನ ಕುಟುಂಬದ ಸದಸ್ಯದ ಜೊತೆ ನಾವೆಲ್ಲರೂ ಇದ್ದೇವೆ. ಮನೆಗೆ ಆಧಾರ ಸ್ಥಂಭವಾಗಿದ್ದ ಮನೆ ಮಗನ ಕಳೆದುಕೊಂಡ ಅವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು.