ಪುತ್ತೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹೀನಾಯವಾಗಿ ದೌರ್ಜನ್ಯ ನಡೆಯುತ್ತಿದ್ದು, ನಾಗರಿಕ ಸಮಾಜವನ್ನು ಒಪ್ಪಿಕೊಳ್ಳವ ರೀತಿಯಲ್ಲಿರಬೇಕಾದ ಅಲ್ಲಿನ ಪ್ರಧಾನಿ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಡಿ.4 ರಂದು ಮಂಗಳೂರಿನ ಮಿನಿವಿಧಾನ ಸೌಧದ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡು ದೌರ್ಜನ್ಯ ನಡೆಸಿ, ದೇವಸ್ಥಾನ, ಮಠ, ಮಂದಿರಗಳನ್ನು ಲೂಟಿ ಮಾಡುತ್ತಿರುವ ವಿಚಾರವನ್ನು ಇಡೀ ದೇಶ ಗಂಭೀರವಾಗಿ ತೆಗೆದುಕೊಂಡಿದೆ. ಬಾಂಗ್ಲಾಕ್ಕೆ ಸರಿಯಾದ ದಿಕ್ಕು ತೋರಿಸುವಲ್ಲಿ ನಮ್ಮ ಪ್ರಧಾನಿ ಈಗಾಗಲೇ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೂ ಸರಿಯಾಗುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪುತ್ತೂರಿನ ಪ್ರತಿ ಬೂತ್ ನಿಂದ 20 ಜನರಂತೆ ಪುತ್ತೂರಿನಿಂದ ಸುಮಾರು ಐದು ಸಾವಿರ ಮಂದಿ ಹಿಂದೂ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.