ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಬಿಜೆಪಿಯಿಂದ ಪ್ರತಿಭಟನೆ | ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿದೆ : ಸಂಜೀವ ಮಠಂದೂರು

ಉಪ್ಪಿನಂಗಡಿ: ಈಗಿನ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಗುತ್ತಿಗೆದಾರರಿಗೆ 10 ಪೈಸೆ ಹಣವೂ ನೀಡಿಲ್ಲ. ಆದ್ದರಿಂದ ಎಲ್ಲಾ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿಯುವಂತಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.

34 ನೆಕ್ಕಿಲಾಡಿ – ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ 34 ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಆರೋಪಿಸಿ 34 ನೆಕ್ಕಿಲಾಡಿಯ ಆದರ್ಶನಗರದ ಬಳಿ ಡಿ.2ರಂದು ನಡೆದ ಪ್ರತಿಭಟನೆಯಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ ಅವರು ಮಾತನಾಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬೊಳುವಾರು- 34 ನೆಕ್ಕಿಲಾಡಿ ರಸ್ತೆಗೆ 20 ಕೋ. ರೂ. ಅನುದಾನ ತಂದಿದ್ದೇನೆ. ಇಲ್ಲಿ ಈ ರಸ್ತೆಯ ಕೆಲಸ ಕಳೆದ ಡಿಸೆಂಬರ್‌ನಲ್ಲಿ ಮುಗಿದು ಪ್ರಯಾಣ ಯೋಗ್ಯ ರಸ್ತೆಯಾಗಬೇಕಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ರಸ್ತೆಯ ಕೆಲಸ ಕುಂಟುತ್ತಾ ಸಾಗುತ್ತಿದೆ. ರಸ್ತೆಯ ಈ ಸ್ಥಿತಿಗೆ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಂಚಿಗೆ ತಲುಪಿದ್ದೇ ಕಾರಣ. ಇದರೊಂದಿಗೆ ಸರಕಾರ ಗುತ್ತಿಗೆದಾರರನ್ನು ದಿವಾಳಿಯಂಚಿಗೆ ತಲುಪಿಸುತ್ತಿದೆ. ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಮೂಳೆ ಮುರಿತಕ್ಕೊಳಗಾಗುತ್ತಿದ್ದಾರೆ. ವಾಹನಗಳು ದುರಸ್ತಿಗೆ ಬರುವಂತಾಗಿದೆ. ಇದೊಂದು ಕಿವಿ, ಮೂಗು, ಕಣ್ಣು ಇಲ್ಲದ ಕುಂಟು ಸರಕಾರವಾಗಿದ್ದು, ದಪ್ಪ ಚರ್ಮದ ಇದಕ್ಕೆ ಕೋಣನ ಮುಂದೆ ಕಿನ್ನರಿ ಅಲ್ಲ ಚಾಟಿ ಬೀಸಬೇಕಾದ ಸ್ಥಿತಿ ಬಂದೊದಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದರೆ, ರಾಜ್ಯ ಸರಕಾರದ ಎಲ್ಲಾ ಕಾಮಗಾರಿಗಳು ವಿಳಂಬವಾಗುತ್ತಿರುವುದರಿಂದ ಜನ ಸಾಮಾನ್ಯರು ಬವಣೆ ಪಡಬೇಕಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಪುತ್ತೂರು ವಿಧಾನ ಕ್ಷೇತ್ರವನ್ನು ಕತ್ತಲಿಗೆ ದೂಡುವ ಕೆಲಸವಾಗಿದೆ ಎಂದರು.































 
 

ಬಿಜೆಪಿಯ ಪ್ರತಿಭಟನೆಯು ರಾಜಕೀಯ ಪ್ರೇರಿತ ಎಂದು ಕೆಲವರು ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಈ ಪ್ರತಿಭಟನೆ ಜನರ ಹಿತಕ್ಕಾಗಿ. ರಾಜಕೀಯ ಮಾಡಲು ನಮಗೆ ಈ ರಸ್ತೆ ಬೇಕಾಗಿಲ್ಲ. ಅದಕ್ಕೆ ಸಾಕಷ್ಟು ವೇದಿಕೆಗಳು ಇವೆ ಎಂದ ಅವರು, ಇದು ಸಾಂಕೇತಿಕ ಪ್ರತಿಭಟನೆಯಷ್ಟೇ ನಾವು ಕೊಟ್ಟ ಗಡುವಿನೊಳಗೆ ಕಾಮಗಾರಿ ಮುಗಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಜನರು ಅವಘಡಕ್ಕೊಳಗಾಗಿ ಆಸ್ಪತ್ರೆಗೆ ಸೇರುವಂತಾಗಿದೆ. ಹಗರಣಗಳ ಮೇಲೆ ಹಗರಣ ಮಾಡುತ್ತಿರುವ ರಾಜ್ಯ ಸರಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಈ ಹೆದ್ದಾರಿಯ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ತಕ್ಷಣವೇ ಈ ಕಾಮಗಾರಿ ಕೆಲಸವನ್ನು ನಿರ್ವಹಿಸಬೇಕು. ಇದೇ ರೀತಿಯ ಚಾಳಿ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಪಿಡಬ್ಲ್ಯೂಡಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಾನಿಷ್ಕ ಸ್ಥಳಕ್ಕೆ ಬಂದು 12 ದಿನದೊಳಗೆ ಒಂದು ಲೇಯ‌ರ್ ಡಾಮರು ಹಾಕಿ ಕೊಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯ ಸಂದರ್ಭ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಅರ್ಧ ಗಂಟೆಯಷ್ಟು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ, ಹೆದ್ದಾರಿಯ ಎರಡೂ ಕಡೆಗಳಲ್ಲಿ ವಾಹನಗಳ ಸರತಿ ಸಾಲು ಕಂಡು ಬಂತು.

ಪ್ರತಿಭಟನೆಯಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿಉಜಿರೆಮಾರ್, ಬಿಜೆಪಿ ಮುಖಂಡರಾದ ಸುನೀಲ್ ಕುಮಾ‌ರ್ ದಡ್ಡು, ಮುಕುಂದ ಗೌಡ ಬಜತ್ತೂರು, ಪುರುಷೋತ್ತಮ ಮುಂಗ್ಲಿಮನೆ, ಎನ್. ಉಮೇಶ್ ಶೆಣೈ, ರಾಮಚಂದ್ರ ಪೂಜಾರಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಪ್ರಶಾಂತ್ ನೆಕ್ಕಿಲಾಡಿ, ಸದಾನಂದ ನೆಕ್ಕಿಲಾಡಿ, ಸುಜಾತ ರೈ ಅಲಿಮಾ‌ರ್, ಸ್ವಪ್ನ ನೆಕ್ಕಿಲಾಡಿ,ಅನಿಲ್ ತೆoಕಿಲ, ಸುರೇಶ್ ಆಳ್ವ, ಗೀತಾ ನೆಕ್ಕಿಲಾಡಿ, ಶಿವಾನಂದ ಕಜೆ, ರಮೇಶ್ ಸುಭಾಶ್‌ನಗರ, ಸದಾನಂದ ಶೆಟ್ಟಿ ಅಡೆಕ್ಕಲ್, ಹರೀಶ ದರ್ಬೆ, ಪ್ರಸಾದ್ ಬಂಡಾರಿ, ಸಂತೋಷ್ ಕುಮಾ‌ರ್ ಪಂರ್ದಾಜೆ, ಶಿವಪ್ಪ, ವಿದ್ಯಾಧರ ಜೈನ್, ಕೇಶವ ಸುಣ್ಣಾನ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top