ಪಕ್ಷದಿಂದ ಉಚ್ಚಾಟಿಸಲು ವಿಜಯೇಂದ್ರ ಬಣದ ಬಿಗಿಪಟ್ಟು
ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡೂ ವಕ್ಫ್ ವಿರುದ್ಧ ತನ್ನದೇ ಪ್ರತ್ಯೇಕ ಹೋರಾಟ ನಡೆಸುತ್ತಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ವಿರುದ್ಧ ಯಡಿಯೂರಪ್ಪ ಬಣದ ಕೂಗು ಜೋರಾಗಿದ್ದು, ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಸದಾ ಯಡಿಯೂರಪ್ಪ ಪರಿವಾರವನ್ನು ಟೀಕಿಸುತ್ತಾ ಬಿಜೆಪಿಗೆ ತಲೆನೋವಾಗಿದ್ದ ಯತ್ನಾಳ್ ವಿರುದ್ಧ ಉಪಚುನಾವಣೆ ಸೋಲಿನ ಬಳಿಕ ಯಡಿಯೂರಪ್ಪ ನಿಷ್ಠರು ಸಿಡಿದೆದ್ದಾರೆ. ಸೋಲಿಗೆ ಯತ್ನಾಳ್ ಹೇಳಿಕೆಗಳೇ ಕಾರಣ ಎಂದು ಸೋಲನ್ನು ಅವರ ತಲೆಗೆ ಕಟ್ಟಿದ್ದು ಮಾತ್ರವಲ್ಲದೆ ಅವರ ಮೇಲೆ ಲಗಾಮು ಹಾಕದಿದ್ದರೆ ಪರಿಸ್ಥಿತಿ ಕೈ ಮೀರಲಿದೆ ಎಂದು ಎಚ್ಚರಿಸಿದ್ದಾರೆ.
ವಿಜಯೇಂದ್ರ ಆಪ್ತ ಬಣ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದು, ಈ ಸಂಬಂಧ ಹೈಕಮಾಂಡ್‌ಗೆ ಸಂದೇಶ ರವಾನಿಸಲು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. 30ಕ್ಕೂ ಹೆಚ್ಚು ಜನರ ತಂಡ ಚಾಮುಂಡಿ ಬೆಟ್ಟದಲ್ಲಿ ದುಷ್ಟ ಸಂಹಾರದ ಶಪಥ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಂತರ ಮೈಸೂರಿನಲ್ಲೇ ಕಾರ್ಯಕರ್ತರ ಸಭೆ ನಡೆಸಿದ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಈಗ ಯಡಿಯೂರಪ್ಪ ಮನೆಯಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ ನಡೆಯುತ್ತಿದೆ. ಯತ್ನಾಳ್ ಉಚ್ಚಾಟನೆಯೇ ಈ ರಹಸ್ಯ ಸಭೆಯ ಅಜೆಂಡಾ ಎನ್ನಲಾಗಿದೆ.
ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು. ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವು ಮುಖಂಡರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿದ್ದಾರೆ. ಯತ್ನಾಳ್ ಉಚ್ಚಾಟನೆಗೆ ಕೇಳಿ ಬಂದಿರುವ ಕಾರ್ಯಕರ್ತರ ಅಭಿಪ್ರಾಯವನ್ನು ಈ ಸಭೆಯಲ್ಲಿ ಯಡಿಯೂರಪ್ಪ ಮುಂದೆ ಇಟ್ಟಿದ್ದಾರೆ.
ಆದರೆ ಪಕ್ಷದಲ್ಲಿ ಯತ್ನಾಳ್‌ಗೂ ಸಾಕಷ್ಟು ಬೆಂಬಲ ಇದೆ. ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಯತ್ನಾಳ್ ಬೆನ್ನಿಗೆ ನಿಂತಿದ್ದಾರೆ. ಬಿಜೆಪಿ ಅಧ್ಯಕ್ಷ, ವಿಪಕ್ಷ ನಾಯಕ ಸೇರಿ ಹಲವರ ಹೊಂದಾಣಿಕೆ ರಾಜಕೀಯದಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ ಎನ್ನುವುದು ಅವರ ವಾದವಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಒಂದು ತಂಡ ಯತ್ನಾಳ್ ಬೆನ್ನಿಗಿದೆ. ಹೀಗಾಗಿ ಯತ್ನಾಳ್ ಉಚ್ಚಾಟನೆ ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕೃತವಾಗಿರುವವರು, ಮೂಲೆ ಗುಂಪಾಗಿದ್ದವರ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಹೋರಾಟದ ದಿಕ್ಕು ತಪ್ಪಿಸುವವರ ಬಗ್ಗೆ ಮಾತನಾಡುವುದಿಲ್ಲ. ಇಡೀ ಬಿಜೆಪಿ ವಕ್ಫ್ ವಿರುದ್ಧ ವಿಜಯೇಂದ್ರ-ಯತ್ನಾಳ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದೆ. ಇದಕ್ಕಾಗಿ ಯಾಕೆ ಅಪಸ್ವರ ಬರುತ್ತಿದೆ ಎಂದು ನನಗೆ ಗೊತ್ತಿಲ್ಲ. ಯತ್ನಾಳ್ ಕೂಡ ಜನಪ್ರಿಯ ನಾಯರಾಗಿದ್ದಾರೆ. ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಾಪ್ ಸಿಂಹ ಪ್ರತ್ಯೇಕ ಹೋರಾಟವನ್ನು ಸಮರ್ಥಿಸಿಕೊಡಿದ್ದಾರೆ.