ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌

ಬಂಟ್ವಾಳದ ಉದ್ಯಮಿಗೆ ಕೋಟಿಗಳ ವ್ಯವಹಾರದ ಕಥೆ ಹೇಳಿ ವಂಚನೆ

ಬೆಂಗಳೂರು: ತುಳು-ಕನ್ನಡ ಚಿತ್ರ ನಿರ್ಮಾಪಕ ಅರುಣ್‌ ರೈ ವಿರುದ್ಧ ಕೋಟಿಗಟ್ಟಲೆ ರೂಪಾಯಿ ವಂಚನೆ ಕೇಸ್‌ ದಾಖಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ತುಳುಚಿತ್ರ ಜೀಟಿಗೆ ಸಹಿತ ತುಳು ಮತ್ತು ಕನ್ನಡದಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿರುವ ಅರುಣ್‌ ರೈ ಬಂಟ್ವಾಳದ ಉದ್ಯಮಿಯೊಬ್ಬರನ್ನು ಕೋಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರದ ಕಥೆ ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.
ಅರುಣ್ ರೈ ವಿರುದ್ಧ ಬೆಂಗಳೂರಿನ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ ಅರುಣ್ ನಿರ್ಮಾಣ ಮಾಡುತ್ತಿದ್ದರು. ದೂರು ದಾಖಲಾದ ಬೆನ್ನಲ್ಲೆ ಅರುಣ್‌ ರೈ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಂಟ್ವಾಳ ಮೂಲದ ಉದ್ಯಮಿಯೊಬ್ಬರನ್ನು ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ಪರಿಚಯ ಮಾಡಿಕೊಂಡಿದ್ದ ಅರುಣ್ ರೈ, ತಾನು ‘ವೀರಕಂಬಳ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಅದರ ಲಾಭಾಂಶದಲ್ಲಿ 60 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದಾನೆ. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ರೂ. ನಷ್ಟವಾಗಿತ್ತು. ಅದನ್ನೇ ಬಂಡವಾಳವಾಗಿ ಬಳಸಿದ ಅರುಣ್ ರೈ ತಾನು ಹಣ ಮತ್ತೆ ಗಳಿಸಿಕೊಡುವುದಾಗಿ ಹೇಳಿ ಆಸೆ ಹುಟ್ಟಿಸಿದ್ದರು.
ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿ ನಾನು ನಿಮಗೆ ಲಾಭ ಮಾಡಿಕೊಡುತ್ತೇನೆ ಎಂದಿದ್ದ ಅರುಣ್, ತಾನು ದೆಹಲಿಯಲ್ಲಿ 400 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ತಮಿಳುನಾಡಿನ ದಿಂಡಿಗಲ್ ಕಾಳಿಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಸಾಲ ಕೊಡಿಸ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ರೂ. ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್‌ನಲ್ಲಿ 40 ಕೋಟಿ ಮೌಲ್ಯದ ಕ್ಯಾಶ್ಯೂ ನಟ್ಸ್ (ಗೋಡಂಬಿ )ಇದೆ, ಅದನ್ನು 25 ಕೋಟಿಗೆ ನೀಡುತ್ತೇನೆ ಎಂದೆಲ್ಲ ಕೋಟಿಗಳ ಸುಳ್ಳು ಹೇಳಿದ್ದರು.
ಬೆಂಗಳೂರಿನ ಹಲವು ಕಂಪನಿ ಹಾಗೂ ಕಟ್ಟಡಗಳನ್ನ ತೋರಿಸಿ ಇದೆಲ್ಲವೂ ತನ್ನದೇ ಎಂದು ಹೇಳಿದ್ದ ನಿರ್ಮಾಪಕರ ಅರುಣ್, ಎಚ್‌ಎಸ್‌ಆರ್‌ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು, ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದಿದ್ದ ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದರು. ದುಬೈ, ಗಾಂಬಿಯಾ, ಘಾನ, ಉಜ್ಬೇಕಿತ್ಥಾನ, ಮಲೇಷ್ಯಾಗಳಲ್ಲಿ ವ್ಯವಹಾರ ನನಗೆ ಇದೆ, ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್​ರ ಆಪ್ತ ಸಹ ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಸುಳ್ಳಿನ ಮೇಲೆ ಸುಳ್ಳು ಹೇಳಿದ್ದರು.































 
 

ನಿರ್ಮಾಪಕನ ಬಣ್ಣದ ಮಾತುಗಳನ್ನು ನಂಬಿದ ಉದ್ಯಮಿ ಬೇರೆ ಬೇರೆ ಕಡೆಗಳಿಂದ ಸಾಲ ಮಾಡಿ ಸುಮಾರು 9 ಕೋಟಿ ಹಣವನ್ನು ಕಂಪನಿಯ ಷೇರು ಖರೀದಿಗಾಗಿ ನೀಡಿದ್ದಾರೆ. ಉದ್ಯಮಿಗೆ ಕೆಲ ನಕಲಿ ಕರಾರು ಪತ್ರಗಳನ್ನು ನಿರ್ಮಾಪಕ ಅರುಣ್ ಮತ್ತು ಆತನ ಕೆಲವು ಸಹಚರರು ನೀಡಿದ್ದಾರೆ. ತಾನು ಮೋಸ ಹೋಗಿರುವುದು ತಿಳಿದ ಮೇಲೆ ಬಂಟ್ವಾಳದ ಉದ್ಯಮಿ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ, ಕೆ.ಪಿ.ಶ್ರೀನಿವಾಸ್ ಎಂಬುವವರ ವಿರುದ್ದ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top