ಮರಳಿ ಕೇರಳದ ಕಾಡು ಸೇರಿಕೊಂಡಿರುವ ಶಂಕೆ
ಕಾರ್ಕಳ : ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಅಳಿದುಳಿದ ನಕ್ಸಲರೆಲ್ಲ ಮರಳಿ ಕೇರಳದತ್ತ ಪಲಾಯನ ಮಾಡಿರುವ ಶಂಕೆಯಿದೆ. ವಿಕ್ರಂ ಗೌಡ ಎನ್‌ಕೌಂಟರ್ ಆದ ಬಳಿಕ ಕಾರ್ಕಳ, ಚಿಕ್ಕಮಗಳೂರು ಮತ್ತಿತರೆಡೆ ನಕ್ಸಲ್ ನಿಗ್ರಹ ಪಡೆಯವರು ಪೊಲೀಸರೊಂದಿಗೆ ತೀವ್ರ ಹುಡುಕಾಟ ನಡೆಸಿದರೂ ನಕ್ಸಲರ ಜಾಡು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕಾಡಿನಿಂದ ನಾಡಿಗಿಳಿದು ವಾಹನದ ಮೂಲಕ ಪರಾರಿಯಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಸಂಪಾಜೆ, ಕೊಪ್ಪ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಿ ತಪಾಸಣೆಯನ್ನೂ ನಡೆಸಲಾಗಿತ್ತು. ಹೀಗಿದ್ದರೂ ನಕ್ಸಲರು ಪತ್ತೆಯಾಗದಿರುವುದು ಅವರು ಸುರಕ್ಷಿತ ತಾಣ ಸೇರಿಕೊಂಡರೆ ಎಂಬ ಅನುಮಾನ ಮೂಡುವಂತಾಗಿದೆ.
ನ.18ರಂದು ಹೆಬ್ರಿಯ ಪೀತಬೈಲು ಎಂಬಲ್ಲಿ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ನಕ್ಸಲ್ ನಿಗ್ರಹ ಪಡೆಯವರು ಹೇಳಿದ ಪ್ರಕಾರ ಈ ಸಂದರ್ಭದಲ್ಲಿ ವಿಕ್ರಂ ಗೌಡನ ಜೊತೆ ಇಬ್ಬರು ಮಹಿಳೆಯರು ಮತ್ತು ಇನ್ನೊಬ್ಬ ಪುರುಷನಿದ್ದ. ಗುಂಡಿನ ಚಕಮಕಿ ಶುರುವಾಗುತ್ತಿದ್ದಂತೆ ಅವರು ಕಾಡಿನೊಳಗೆ ಓಡಿಹೋಗಿದ್ದಾರೆ. ಕೂಡಲೇ ಪೊಲೀಸರ ಅವರನ್ನು ಬೆನ್ನಟ್ಟಿದರೂ ಅವರು ಸಿಕ್ಕಿಲ್ಲ. ಅಷ್ಟು ಬೇಗ ಅವರು ಎತ್ತಕಡೆ ಪಲಾಯನ ಮಾಡಿರಬಹುದು ಎಂಬ ಅನುಮಾನ ಇನ್ನೂ ಉಳಿದುಕೊಂಡಿದೆ.
ಕೇರಳದಲ್ಲಿ ಅಲ್ಲಿನ ನಕ್ಸಲ್ ನಿಗ್ರಹ ಪಡೆ ಥಂಡರ್ ಬೋಲ್ಟ್‌ನ ಕಾರ್ಯಾಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ನಕ್ಸಲರ ಎರಡು ತಂಡ ಮತ್ತೆ ಮಲೆನಾಡಿನತ್ತ ಬಂದಿತ್ತು. ಕೇರಳದ ನಕ್ಸಲ್ ಮುಖಂಡರ ಜೊತೆಗೆ ಕಾಣಿಸಿಕೊಂಡ ಮನಸ್ತಾಪ ಕೂಡ ವಿಕ್ರಂ ಗೌಡ ಮರಳಿ ತನ್ನ ಹುಟ್ಟೂರಿನತ್ತ ಬರಲು ಕಾರಣ ಎನ್ನಲಾಗುತ್ತಿದೆ.
ಪಶ್ಚಿಮ ಘಟ್ಟ ಸಂರಕ್ಷಣೆ ನೆಪದಲ್ಲಿ ಘಟ್ಟದ ತಪ್ಪಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವ ವಿಚಾರ ಮರಳಿ ಮುನ್ನೆಲೆಗೆ ಬಂದ ಸಮಯದಲ್ಲೇ ನಕ್ಸಲರು ಮಲೆನಾಡಿನತ್ತ ಬಂದು ವಿಕ್ರಂ ಗೌಡ ಮತ್ತು ಮುಂಡಗಾರು ಲತಾ ನೇತೃತ್ವದಲ್ಲಿ ಎರಡು ತಂಡಗಳಾಗಿ ಮತ್ತೆ ಘಟ್ಟದ ತಪ್ಪಲಿನ ಜನರನ್ನು ಸಂಘಟಿಸಿ ಹೋರಾಟ ಶುರು ಮಾಡುವ ಪ್ರಯತ್ನದಲ್ಲಿದ್ದರು. ಈ ಸಂದರ್ಭದಲ್ಲಿ ಕಾರ್ಕಳದ ಈದು, ಚಿಕ್ಕಮಗಳೂರಿನ ಕೊಪ್ಪ ಮತ್ತಿತತರೆಡೆ ನಕ್ಸಲರು ಓಡಾಡಿದ ಮಾಹಿತಿ ಸಿಕ್ಕಿ ನಕ್ಸಲ್ ನಿಗ್ರಹ ಪಡೆ ಎಚ್ಚೆತ್ತುಕೊಂಡು ಕಾರ್ಯಾಚರಣೆ ಪ್ರಾರಂಭಿಸಿತ್ತು. ಅಂತಿಮವಾಗಿ ವಿಕ್ರಂ ಗೌಡನನ್ನು ಎನ್‌ಕೌಂಟರ್‌ನಲ್ಲಿ ಬಲಿ ತೆಗೆದುಕೊಳ್ಳುವುದರೊಂದಿಗೆ ಪೊಲೀಸರು ನಕ್ಸಲರ ಪುನಶ್ಚೇತನ ಪ್ರಯತ್ನವನ್ನು ಸದ್ಯದ ಮಟ್ಟಿಗೆ ವಿಫಲಗೊಳಿಸಿದ್ದಾರೆ. ಆದರೆ ಉಳಿದ ನಕ್ಸಲರು ಎಲ್ಲಿ ಹೋದರು ಎಂಬ ಪ್ರಶ್ನೆ ಮಾತ್ರ ಇನ್ನೂ ಉಳಿದುಕೊಂಡಿದೆ.
ಮಲೆನಾಡಿನಲ್ಲಿ ನಕ್ಸಲರು ಮರಳಿ ಸಕ್ರಿಯವಾಗುವ ಪ್ರಯತ್ನ ಶುರು ಮಾಡಿದ 15-20 ದಿನದಲ್ಲೇ ನಕ್ಸಲ್ ನಾಯಕ ವಿಕ್ರಂಗೌಡ ಎಎನ್‌ಎಫ್ ಗುಂಡಿಗೆ ಬಲಿಯಾಗಿದ್ದಾನೆ. ಅನಂತರ ಮುಂಡಗಾರು ಲತಾ ಆ್ಯಂಡ್ ಟೀಂ ನಿಗೂಢವಾಗಿ ಕಣ್ಮರೆಯಾಗಿದೆ. ಇತ್ತ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಜೊತೆಗಿದ್ದ ಸಹಚರರ ಸುಳಿವೂ ಇಲ್ಲ. ಪೊಲೀಸರು ತಿಳಿಸಿದ ಪ್ರಕಾರ ಈಗ ಉಳಿದುಕೊಂಡಿರುವುದು 7-8 ನಕ್ಸಲರು ಮಾತ್ರ.