ಬೇರೊಂದು ಟ್ರಕ್ಗೆ ಲೋಡ್ ಮಾಡಿಕೊಂಡು ಹೋಗಿರುವ ಅನುಮಾನ
ಬೆಂಗಳೂರು: ದಿಲ್ಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 3 ಕೋ. ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ಕಂಟೈನರ್ ಚಾಲಕನೇ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಖಾಲಿ ಕಂಟೈನರ್ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಪತ್ತೆಯಾಗಿದೆ. ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಫೋನ್ಗಳನ್ನು ದಿಲ್ಲಿಯಿಂದ ಬೆಂಗಳೂರಿಗೆ ಕಂಟೈನರ್ನಲ್ಲಿ ಸಾಗಿಸಲಾಗುತ್ತಿತ್ತು. ಎನ್ಎಲ್ 01 ಎಎಫ್ 2743 ನೋಂದಣಿಯ ಕಂಟೇನರ್ನಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನವಾಗಿದೆ. ಪೆರೇಸಂದ್ರೆ ಠಾಣೆ ಪೊಲೀಸರು ಖಾಲಿ ಕಂಟೇನರ್ ವಶಕ್ಕೆ ಪಡೆದುಕೊಂಡಿದ್ದಾರೆ.
ನ.22ರಂದು ಕಂಟೈನರ್ನಲ್ಲಿ 3 ಕೋಟಿ ರೂ. ಮೌಲ್ಯದ ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್ಗಳನ್ನು ತುಂಬಿಕೊಂಡು ದಿಲ್ಲಿಯಿಂದ ಬೆಂಗಳೂರಿನತ್ತ ಹೊರಟಿದ್ದ ಕಂಟೈನರ್ ಸಕಾಲಕ್ಕೆ ಬೆಂಗಳೂರಿಗೆ ತಲುಪಿರಲಿಲ್ಲ. ಹೀಗಾಗಿ ಅನುಮಾನಗೊಂಡ ಕಂಪನಿಯ ಅಧಿಕಾರಿಗಳು ಕಂಟೈನರ್ ಜಿ.ಪಿ.ಎಸ್ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿದ್ದು ಗೊತ್ತಾಗಿದೆ. ಕಂಟೈನರ್ ಪರಿಶೀಲನೆ ನಡೆಸಿದಾಗ ಅದರಲ್ಲಿದ್ದ 3 ಕೋಟಿ ರೂ. ಮೌಲ್ಯದ ಮೊಬೈಲ್ಗಳು ಕಾಣೆಯಾಗಿದ್ದು, ಕಂಟೈನರ್ ಚಾಲಕನೂ ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಸೇಪ್ ಸ್ಪೀಡ್ ಕ್ಯಾರಿಯರ್ಸ್ ಪ್ರೈ. ಲಿಮಿಟೆಡ್ ಕಂಪನಿ ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್ಗಳನ್ನು ಸಾಗಾಟ ಹೊಣೆ ಹೊತ್ತಿತ್ತು. ಇದೇ ಕಂಪನಿಯಲ್ಲಿ ರಾಹುಲ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಲಾರಿ ಪತ್ತೆಯಾದರೂ ಚಾಲಕ ನಾಪತ್ತೆಯಾಗಿದ್ದು, ಪೊಲೀಸರು ಚಾಲಕನ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಬೇರೊಂದು ಟ್ರಕ್ಗೆ ಮೊಬೈಲ್ಗಳನ್ನು ಲೋಡ್ ಮಾಡಿಕೊಂಡು ಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಚಾಲಕನೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.