ಹೈಕಮಾಂಡ್ ನಾಯಕರ ಜೊತೆ ಇಂದು ಮಹತ್ವದ ಮಾತುಕತೆ
ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಳಿಕ ಬಲಿಷ್ಠರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟಕ್ಕೆ ಸರ್ಜರಿ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದು ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿರುವುದರಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆಯೂ ಸೇರಿದಂತೆ ಸರಕಾರದ ಮಟ್ಟದಲ್ಲಿ ದೊಡ್ಡ ಬದಲಾವಣೆ ನಡೆಯುವ ಬಗ್ಗೆ ಕುತೂಹಲ ಗರಿಗೆದರಿದೆ.
ಈಗಾಗಲೇ ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಬುಧವಾರವೇ ಸಂಪುಟ ಸರ್ಜರಿಯ ಸುಳಿವು ಕೊಟ್ಟಿದ್ದರು. ಸಂಪುಟ ಪುನಾರಚನೆ ಮಾತ್ರವಲ್ಲದೆ ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಶಾಸಕರನ್ನು ಕರೆತರುವ ಸಲುವಾಗಿ ಆಪರೇಷನ್ ಹಸ್ತ ಕಾರ್ಯಾಚರಣೆಯೂ ನಡೆಯಲಿದೆ. ಈಗಾಗಲೇ ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದಾರೆ. ಅಂತೆಯೇ ಜೆಡಿಎಸ್‌ನ ಕೆಲವು ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ವಿಚಾರವನ್ನು ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಆಪರೇಷನ್ ಹಸ್ತ ಮಾಡಲು ಅನುಮತಿ ಪಡೆದುಕೊಳ್ಳುವುದು ಡಿಕೆಶಿ ಮತ್ತು ಸಿದ್ದರಾಮಯ್ಯ ದಿಲ್ಲಿ ಭೇಟಿಯ ಇನ್ನೊಂದು ಉದ್ದೇಶ ಎನ್ನಲಾಗಿದೆ.
ಸಂಪುಟ ಪುನಾರಚನೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಬೇಕೆಂಬ ಕೂಗು ಕೂಡ ಕಾಂಗ್ರೆಸ್‌ನಲ್ಲಿದೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವು ನಿಯಮದಂತೆ ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಕೆಲವು ನಿಷ್ಕ್ರಿಯ ಮತ್ತು ಸರಕಾರಕ್ಕೆ ಕಳಂಕ ತಂದಿರುವ ಸಚಿವರನ್ನು ಕೈಬಿಡಬೇಕೆಂಬ ಚಿಂತನೆ ಹಿಂದಿನಿಂದಲೂ ಇದೆ. ಇಷ್ಟರ ತನಕ ಉಪಚುನಾವಣೆ ಮುಗಿಯಲಿ ಎಂದು ಕಾಯಲಾಗುತ್ತಿತ್ತು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಂಡಿರುವುದುರಿಂದ ಪಕ್ಷದ ವರ್ಚಸ್ಸು ಕಡಿಮೆಯಾಗಿಲ್ಲ ಎಂಬ ಭಾವನೆ ಬಂದಿದೆ. ಹೀಗಾಗಿ ಚಳಿಗಾಲದ ಅಧಿವೇಶನ ಶುರುವಾಗುವುದಕ್ಕೂ ಮೊದಲೇ ಕೆಲವು ಸಚಿವರನ್ನು ಬದಲಾಯಿಸಿ ವಿಪಕ್ಷಗಳಿಗೆ ದಾಳಿ ಮಾಡಲು ವಿಷಯಗಳು ಇಲ್ಲದಂತೆ ಮಾಡುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
ಒಂದು ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಸೂಚನೆ ಸಿಕ್ಕಿದೆ. ಆದರೆ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಸಿದ್ದರಾಮಯ್ಯ ಸಮಯ ಕೋರಿದ್ದರು. ಕೆಲ ಶಾಸಕರು ಈಗಾಗಲೇ ದಿಲ್ಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಸಂಪುಟ ಸೇರಲು ಒಂದು ಡಜನ್‌ಗಿಂತಲೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಆಗುವುದನ್ನು ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ದಿನೇಶ್ ಗುಂಡೂರಾವ್ ಎರಡು ವರ್ಷಕ್ಕೊಮ್ಮೆ ಪುನರ್ ರಚನೆ ಆದರೆ ಒಳ್ಳೆಯದು ಎಂದಿದ್ದಾರೆ. ಹೀಗಾಗಿ ಸಂಪುಟದಲ್ಲಿ ಕೆಲವು ಹೊಸಮುಖಗಳು ಕಾಣಲಿವೆ ಎನ್ನಲಾಗುತ್ತಿದೆ.