ಮುಡಾ ಹಗರಣದ ಬಳಿಕ ಪಾರ್ವತಮ್ಮ ವಿರುದ್ಧ ಇನ್ನೊಂದು ಕೇಸ್
ಮೈಸೂರು: ಭೂ ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನುಬಿಡುತ್ತಿಲ್ಲ. ಮುಡಾ ಹಗರಣದ ಮಧ್ಯೆ ಈಗ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಪಾರ್ವತಮ್ಮ ಹಾಗೂ ಸಿದ್ದರಾಮಯ್ಯನವರ ಬಾಮೈದ ಸೇರಿ ಒಟ್ಟು 10 ಜನರ ಮೇಲೆ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ.
ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರೂವರೆ ಎಕರೆ ಜಮೀನಿಂದ ಈಗ ಕಾನೂನಿನ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ಕಳೆದ 4 ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಇದೇ ಜಮೀನು ಹಾಗೂ ಜಮೀನಿನಿಂದ ಸಿಕ್ಕ ಪರಿಹಾರ ರೂಪದ 14 ಸೈಟ್‌ಗಳು ಬಿರುಗಾಳಿ ಎಬ್ಬಿಸಿವೆ. ಹಲವು ತನಿಖೆಗಳು ಇದರಿಂದ ನಡೆಯುತ್ತಿವೆ. ಈಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣದ ಮೂಲ ಭೂಮಿಯ ಬಗ್ಗೆ ವಿವಾದ ಹುಟ್ಟಿಕೊಂಡಿದೆ.
ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜ್ ಎಂಬುವರು ಕೆಸರೆ ಭಾಗದಲ್ಲಿ ಮೂರೂವರೆ ಎಕರೆ ಜಮೀನು ಮಾರಿದ್ದರು. ಈಗ ಆ ಜಮೀನು ದೇವರಾಜ್ ಅವರದ್ದಲ್ಲ, ತಮ್ಮದ್ದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ.
ಈ ಬಗ್ಗೆ ಜಮುನಾ ಸಹೋದರ ಮಂಜುನಾಥ್ ಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿ ನಮ್ಮ ಜಮೀನನ್ನು ತಮ್ಮದ್ದು ಎಂದು ಮಾರಾಟ ಮಾಡಿದ್ದಾರೆ. ಹೀಗಾಗಿ ನಾವು ತಮ್ಮ ಚಿಕ್ಕಪ್ಪ ದೇವರಾಜ್ ಸೇರಿದಂತೆ ಅವರು ಜಮೀನು ಮಾರಾಟ ಮಾಡಿರುವ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಮೇಲೂ ಕೇಸ್ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಖಾತೆ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ನನ್ನ ಚಿಕ್ಕಪ್ಪ ಮೂವತ್ತು ವರ್ಷಗಳ ಹಿಂದೆ ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಮಾಡಿಸಿಕೊಂಡಿದ್ದರು. ಆ ಜಮೀನು ನನ್ನ ತಂದೆಗೆ ಭಾಗವಾಗಿ ಬಂದ ಪಿತ್ರಾರ್ಜಿತ ಆಸ್ತಿ. ಆ ಆಸ್ತಿಯನ್ನೆ ಮೋಸದಿಂದ ನನ್ನ ಚಿಕ್ಕಪ್ಪ ಪಡೆದು ಅದನ್ನು ಸಿಎಂ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.