ಹಿಂದೆ ಸಂಕಟ ಮೋಚನ ಮಹಾದೇವ ದೇವಳವಾಗಿತ್ತು ಎಂದು ವಾದ
ಜೈಪುರ: ಉತ್ತರ ಪ್ರದೇಶದ ಬಳಿಕ ಈಗ ರಾಜಸ್ಥಾನದಲ್ಲೂ ಮಂದಿರ-ಮಸೀದಿ ವಿವಾದ ಶುರುವಾಗಿದೆ. ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಪ್ರಸಿದ್ಧ ದರ್ಗಾ ಹಿಂದೆ ಶಿವನ ದೇವಾಲಯವಾಗಿತ್ತು ಎಂಬ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ.
ಅಜ್ಮೇರ್‌ನ ಸೂಫಿ ಸಂತ ಮೊಹಿನುದ್ದೀನ್ ಚಿಸ್ತಿಯ ದರ್ಗಾದೊಳಗೆ ಶಿವನ ದೇಗುಲ ಇದೆ, ಇದನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ಹಿಂದು ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತ ಎಂಬವರು ದಾವೆ ಹೂಡಿದ್ದಾರೆ. ಮನಮೋಹನ್ ಚಂಡೇಲ್ ಅವರ ನ್ಯಾಯಪೀಠ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿ ಅಜ್ಮೇರ್ ದರ್ಗಾ ಕಮಿಟಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಮತ್ತು ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ ಎಂದು ವಿಷ್ಣು ಗುಪ್ತ ಅವರ ವಕೀಲ ಯೋಗೇಶ್ ಸಿರೋಜ ತಿಳಿಸಿದ್ದಾರೆ.
ಅಜ್ಮೇರ್ ದರ್ಗಾ ನಿಜವಾಗಿ ಸಂಕಟ ಮೋಚನ ಮಹಾದೇವ ದೇಗುಲವಾಗಿದ್ದು, ಈಗಲೂ ಶಿವ ದೇವಸ್ಥಾನದ ಕುರುಹುಗಳು ಇಲ್ಲಿವೆ. ಹೀಗಾಗಿ ಪುರಾತತ್ವ ಇಲಾಖೆ ದರ್ಗಾದ ಸರ್ವೆ ಮಾಡಿ ಅದನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ವಿಷ್ಣು ಗುಪ್ತ ವಾದಿಸಿದ್ದಾರೆ.
ದರ್ಗಾವನ್ನು ಸಂಕಟ ಮೋಚನ ಮಹಾದೇವ ದೇವಸ್ಥಾನ ಎಂದು ಘೋಷಿಸಿ ಅಲ್ಲಿನ ಹಕ್ಕುಗಳನ್ನು ಹಿಂದುಗಳಿಗೆ ಬಿಟ್ಟುಕೊಡಬೇಕು. ದರ್ಗಾದ ಹೆಸರಲ್ಲಿರುವ ಎಲ್ಲ ನೋಂದಣಿಗಳನ್ನು ರದ್ದುಪಡಿಸಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಕೆಲದಿನಗಳ ಹಿಂದೆಯಷ್ಟೇ ಮಂದಿರ-ಮಸೀದಿ ವಿವಾದ ಭುಗಿಲೆದ್ದು ನಾಲ್ಕು ಮಂದಿ ಬಲಿಯಾದ ಬೆನ್ನಿಗೆ ಅಜ್ಮೇರ್ ವಿವಾದ ಮುನ್ನೆಲೆಗೆ ಬಂದಿದೆ.