ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡಿದ್ದು ಏಕೆ ಎಂದು ಪ್ರಶ್ನೆ
ಬೆಂಗಳೂರು : ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನ ಬೇಕೆಂದು ಹೇಳಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ ಅವರು ಮನುಸ್ಮೃತಿಯ ಪ್ರತಿಪಾದಕರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಸ್ವಾಮೀಜಿಯವರ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ. ಪೇಜಾವರಶ್ರೀ ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಇಂಥ ಹೇಳಿಕೆ ನೀಡುವ ಅಗತ್ಯವೇನಿತ್ತು? ಅವರು ಮನುಸ್ಮೃತಿ ಪ್ರತಿಪಾದನೆ ಮಾಡುತ್ತಾರೆ, ನಾವು ಸಂವಿಧಾನ ರಕ್ಷಿಸುತ್ತೇವೆ ಎಂದಿದ್ದಾರೆ.
ಮೇಲು-ಕೀಳು, ಮೇಲ್ಜಾತಿ-ಕೀಳ್ಜಾತಿ ತಾರತಮ್ಯ ಸರಿಯಲ್ಲ. ಆದರೆ ಈ ಅಲಿಖಿತ ಸಂವಿಧಾನವನ್ನು ಸಮಾಜ ಒಪ್ಪಿಕೊಂಡಿದೆ. ಇದನ್ನು ಪ್ರತಿಪಾದಿಸುವುದೇ ಮನುಸ್ಮೃತಿ. ಇದನ್ನು ಪ್ರಚುರಪಡಿಸುವವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಎಂದು ಟೀಕಿಸಿದ್ದಾರೆ.