ಕೊನೆಗೂ ಇಸ್ರೇಲ್‌-ಲೆಬನಾನ್‌ ಸಮರಕ್ಕೆ ವಿರಾಮ

ಅಮೆರಿಕ, ಫ್ರಾನ್ಸ್‌ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದ

ಟೆಲ್‌ ಅವಿವ್‌: ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಇಸ್ರೇಲ್‌-ಲೆಬನಾನ್‌ ನಡುವಿನ ಘನಘೋರ ಸಮರ ಕೊನೆಗೂ ಮುಕ್ತಾಯವಾಗಿದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 7.30ರಿಂದಲೇ ಕದನ ವಿರಾಮ ಜಾರಿಗೆ ಬಂದಿದೆ.

ಕದನ ವಿರಾಮ ಒಪ್ಪಂದದ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಲೆಬನಾನ್‌ನ ಪ್ರಧಾನಿ ನಜೀಬ್ ಮಿಕಾಟಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದು 13 ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮಂಗಳವಾರ ಪ್ರಕಟಿಸಿದೆ.
ಕದನ ವಿರಾಮ ಘೋಷಣೆಯಾಗಿರುವುದು ಇಸ್ರೇಲ್‌ ಮತ್ತು ಲೆಬನಾನ್‌ ನಡುವೆ ಮಾತ್ರ. ಗಾಝಾದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಪ್ರಕಟಣೆ ಹೇಳಿದೆ.



































 
 

60 ದಿನಗಳ ಕದನ ವಿರಾಮ ಅವಧಿಯಲ್ಲಿ ಇಸ್ರೇಲ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ. ಇದೇ ವೇಳೆ ಲೆಬನಾನ್‌ ಇಸ್ರೇಲ್‌ ಗಡಿಯಲ್ಲಿರುವ ತನ್ನ ಸೇನೆಯನ್ನು ನಿಯಂತ್ರಿಸುತ್ತದೆ ಎಂದು ಭಾವಿಸುತ್ತೇವೆ. ಕದನ ವಿರಾಮ ಒಪ್ಪಂದದ ಪ್ರಕಾರ ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಿಂದ ಹಿಂತೆಗೆದುಕೊಳ್ಳಬೇಕು. ಆ ಪ್ರದೇಶದಲ್ಲಿ ಲೆಬನಾನ್‌ ತನ್ನ ಸೇನೆಯನ್ನು ನಿಯೋಜಿಸಬೇಕು. ಹಿಜ್ಬುಲ್ಲಾ ಮತ್ತು ಇತರ ಯಾವುದೇ ಭಯೋತ್ಪಾದಕ ಸಂಘಟನೆಗಳು ಇಸ್ರೇಲ್‌ನ ಭದ್ರತೆಗೆ ಬೆದರಿಕೆ ಹಾಕಲು ಅನುಮತಿಸುವುದಿಲ್ಲ ಎಂದು ಜೋ ಬೈಡನ್‌ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ನಂತರ ಯುದ್ಧ ಶುರುವಾಗಿತ್ತು. ಈವರೆಗೆ ಯುದ್ಧದಲ್ಲಿ ಲೆಬನಾನ್‌ನಲ್ಲಿ ಸುಮಾರು 3,800 ಜನರು ಹತ್ಯೆಗೀಡಾಗಿದ್ದಾರೆ, ಸುಮಾರು 16,000 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಎರಡೂ ರಾಷ್ಟ್ರಗಳಿಂದ 43 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top