ಬೋವಿ ನಿಗಮದಲ್ಲಿ 90 ಕೋ. ರೂ. ಭ್ರಷ್ಟಾಚಾರ

ಬಾಡಿಗೆದಾರರು, ನೆರೆಹೊರೆಯವರ ಹೆಸರಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಐದು ವರ್ಷಗಳಲ್ಲಿ ಸುಮಾರು 90 ಕೋ ರೂ. ಭ್ರಷ್ಟಾಚಾರವಾಗಿರುವುದನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪತ್ತೆ ಹಚ್ಚಿದೆ. ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಇಂಥ ಹಲವು ಅವ್ಯವಹಾರಗಳು ಕಂಡುಬಂದಿವೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯಮಿ ಜೀವಾ ಎಂಬಾಕೆಯ ಖಾತೆಗೆ 7.16 ಕೋಟಿ ರೂ. ಜಮೆಯಾಗಿತ್ತು ಎನ್ನಲಾಗಿದೆ.

ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದು ಅವರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ.



































 
 

ಈ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್‌ಪ್ರೈಸಸ್ ಕಂಪನಿಗೆ 7.16 ಕೋಟಿ ರೂ. ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್ ಕಂಪನಿಗೆ 3.79 ಕೋಟಿ ರೂ. ಸೇರಿ ಒಟ್ಟು 10.9 ಕೋಟಿ ರೂ., ನಿಗಮದ ಸಿಬ್ಬಂದಿ ಯಶಸ್ವಿನಿ ಅವರಿಗೆ ಸೇರಿದ್ದ ಎನ್ನಲಾದ ಡ್ರೀಮ್ ಎಂಟರ್‌ಪ್ರೈಸಸ್ ಕಂಪನಿಗೆ 8 ಕೋಟಿ 78 ಲಕ್ಷ ರೂ. ಯಶಸ್ವಿನಿ ಸೋದರ ಕಾರ್ತಿಕ್‌ ಗೌಡ ಹೆಸರಿನಲ್ಲಿನ ಆದಿತ್ಯ ಎಂಟರ್‌ಪ್ರೈಸಸ್ ಕಂಪನಿಗೆ 4 ಕೋಟಿ 76 ಲಕ್ಷ ಜಮೆಯಾಗಿದೆ.

ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕನ ಆಪ್ತ ಸಿ.ಸಂತೋಷ ಹೆಸರಿನಲ್ಲಿನ ಸೋಮನಾಥೇಶ್ವರ ಎಂಟರ್‌ಪ್ರೈಸಸ್ ಕಂಪನಿಗೆ ಬರೋಬ್ಬರಿ 9 ಕೋಟಿ 66 ಲಕ್ಷ ರೂ., ಕಾಂತ ಒಡೆಯರ್ ಹೆಸರಿನ ನ್ಯೂ ಡ್ರೀಮ್ ಎಂಟರ್‌ಪ್ರೈಸಸ್ ಕಂಪನಿ 11 ಕೋಟಿ 40 ಲಕ್ಷ ರೂ., ಪದ್ಮಾ ಎಂಬಾಕೆಯ ಬ್ಯಾಂಕ್ ಅಕೌಂಟ್​ಗೆ ನಿಗಮ ಮತ್ತು ಬ್ಯಾಂಕ್ ಪಿಆರ್​​ಒ ಅಭಿಲಾಷ್‌​ ಅವರಿಗೆ ಸೇರಿದ ಎನ್ನಲಾಗಿರುವ ಕಂಪನಿಗೆ 1 ಕೋಟಿ 26 ಲಕ್ಷ ರೂ. ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಸೋದರಿ ಮಂಗಳ ರಾಮು ಬ್ಯಾಂಕ್ ಅಕೌಂಟ್‌ಗೆ 1 ಕೋಟಿ 48 ಲಕ್ಷ ರೂ. ಸಂದಾಯವಾಗಿದೆ. ಈ ಮೂಲಕ ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಬೆಂಗಳೂರು ನಗರದಲ್ಲೇ ಕಾರ್ಯಚಟುವಟಿಕೆ ಹೊಂದಿವೆ ಎಂದು ಬಿಂಬಿಸಿಕೊಂಡಿದ್ದ ಈ ಕಂಪನಿಗಳ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳು, ಕೆಲ ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಪತ್ತೆಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top