ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಂಗಳೂರು ಶಾಖಾ ಮಠದ ರಜತ ಸಂಭ್ರಮ | ದ.ಕ.ಜಿಲ್ಲೆಯ ವಿವಿಧ ಸಾಧಕರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ | ಮಂಗಳೂರು ಶಾಖಾ ಮಠ ಧರ್ಮ ಕಾರ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದೆ : ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ | ಸಂತ ಮತ್ತು ಸಮಾಜ ನಾಣ್ಯದ ಎರಡು ಮುಖಗಳಿದ್ದಂತೆ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ | ಜನಮಾನಸದಲ್ಲಿ ಕಾರ್ಯಕ್ರಮ ಅಚ್ಚಳಿಯದೇ ಉಳಿಯಬೇಕು ಎಂಬ ಚಿಂತನೆಯಲ್ಲಿ ನಡೆದಿದೆ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಜ್ಞಾನ ಹಾಗೂ ಮಾನವೀಯತೆ ಆಧಾರದಲ್ಲಿ ಸಮಾಜ ಕಟ್ಟಲು ಸಾಧ್ಯ : ಡಾ.ಭರತ್ ವೈ ಶೆಟ್ಟಿ | ಸರಕಾರ ಪ್ರಾಥಮಿಕ , ಪ್ರೌಢಶಾಲೆ ಜತೆಗೆ ಕನ್ನಡವನ್ನು ಉಳಿಸುವ ಕೆಲಸ ಬದ್ಧತೆಯಿಂದ ಮಾಡಬೇಕಾಗಿದೆ : ಡಾ.ಕೆ.ಚಿನ್ನಪ್ಪ ಗೌಡ

ಮಂಗಳೂರು: ಧರ್ಮ ಉಳಿವಿನ ಜತೆಗೆ ಧರ್ಮ ಪ್ರಚಾರ ಮಠಗಳ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ 25 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪ್ರಾರಂಭವಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಇಂದು ಧರ್ಮ ಕಾರ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಸಂಭ್ರಮದ ಅಂಗವಾಗಿ ದ.ಕ.ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಜಗತ್ತಿನ ಬೇರೆ ಬೇರೆ ದೇಶಗಳ ಭೂಮಿ ನಮ್ಮದು. ಈ ಮಣ್ಣಿನಲ್ಲಿ ಬೆಳೆದ ನಾವು ಯಾವತ್ತೂ ಯಾರನ್ನೂ, ಯಾವುದನ್ನೂ ಕಡೆಗಣನೆಯಿಂದ ನೋಡಿದ ಭಾರತದ ಮಣ್ಣಿನ ಮಕ್ಕಳಲ್ಲ. ಜಗತ್ತು ಎಲ್ಲಾ ಒಂದೇ ಎಂಬ ಭಾವನೆಯ ಜತೆಗೆ ಸಂಸ್ಕೃತಿ ನಮ್ಮದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಶುಭ್ರವಾದ ಚಿಂತನೆಯನ್ನು ಬಿಟ್ಟು ಬೇರೆ ಯಾವುದೇ ಚಿಂತನೆ ಮನಸ್ಸಿನಲ್ಲಿ ಹುಟ್ಟಿಕೊಳ್ಳಬಾರದು ಎಂದ ಸ್ವಾಮೀಜಿಯವರು, ಅಶುಭ್ರ ಚಿಂತನೆ ಯಾವಾಗ ನಮ್ಮಲ್ಲಿ ಮನೆ ಮಾಡಿತೋ ಅಂದಿನಿಂದ ನಮ್ಮ ದೇಶ ಪರಕೀಯರ ದಾಳಿಗೆ ತುತ್ತಾಯಿತು. ಅವೆಲ್ಲವನ್ನು ಮೆಟ್ಟಿ ನಿಂತು ಇಂದು ಭಾರತ ಅಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮುಂದಿದ್ದು, ಆರ್ಥಿಕ ಪ್ರಗತಿಯಲ್ಲೂ 5ನೇ ಸ್ಥಾನದಲ್ಲಿದೆ. ಮುಂದಿನ 30 ವರ್ಷಗಳ ಕಾಲಘಟ್ಟದಲ್ಲಿ ನಮ್ಮ ದೇಶ ಮತ್ತಷ್ಟೂ ಅಭಿವೃದ್ಧಿಯನ್ನು ಕಾಣಬೇಕಾದರೆ ಯುವಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಜತೆಗೆ ಸರ್ವ ರೀತಿಯ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಅತೀ ಬಡವ, ಅತೀ ಪ್ರತಿಭಾವಂತ ಮಕ್ಕಳ ಮನೆ ಬಾಗಿಲಿಗೆ ಹೋಗಿ ಕರೆದುಕೊಂಡು ಬಂದು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರುವಂತೆ ಮಾಡಿ ದೇಶದ ಸ್ವತ್ತುಗಳನ್ನಾಗಿ ಮಾಡಲಾಗುವುದು ಎಂದು ಹೇಳಿದರು.































 
 

ಸಂತ ಮತ್ತು ಸಮಾಜ ನಾಣ್ಯದ ಎರಡು ಮುಖಗಳಿದ್ದಂತೆ : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಂತ ಮತ್ತು ಸಮಾಜಕ್ಕೆ ಏನು ಸಂಬಂಧ ಎಂದರೆ ನಾಣ್ಯದ ಎರಡು ಮುಖಗಳಿದ್ದಂತೆ . ನಾಣ್ಯದ ಒಂದು ಮುಖ ಸಂತ, ಇನ್ನೊಂದು ಮುಖ ಸಮಾಜ. ಸಮಾಜಕ್ಕೆ ಸಂತನ ಅನಿವಾರ್ಯತೆ ಇದೆ. ಸಚ್ಚಾರಿತ್ಯ ಸಮಾಜ ನಿರ್ಮಾಣದಲ್ಲಿ ಸಂತನ ಪಾತ್ರ ಇರಬೇಕು ಎಂದ ಅವರು, ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ. ವಿದ್ಯೆಯಲ್ಲಿ ಎರಡು ಪರ ಹಾಗೂ ಅಪರ ವಿದ್ಯೆ. ಲೌಕಿಕ ಶಿಕ್ಷಣದ ಜತೆಗೆ ಆಧ್ಯಾತ್ಮದ ಶಿಕ್ಷಣ ಬೇಕು. ಇಂದು ನೈತಿಕ ಮೌಲ್ಯ ತುಂಬುವ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ವಿಜ್ಞಾನದ ಪೂರ್ಣ ಫಲಿತಾಂಶವೇ ಆಧ್ಯಾತ್ಮ. ಅದರ ನಂತರ ಬೇರೆ ಯಾವುದೂ ಇಲ್ಲ. ಶಿಕ್ಷಣದ ಕುರಿತು ಚಿಂತನೆ ಮಾಡಿದಾಗ ಸಂಸ್ಕಾರಯುತವಾದ ಶಿಕ್ಷಣ ಸಿಕ್ಕಿರುವುದರಿಂದ ಇಲ್ಲಿ  ಇಷ್ಟೊಂದು ಜನ ಸೇರಲು ಕಾರಣವಾಗಿದೆ. ಬದುಕಿಗೆ ಸಮರಸದ ಶಿಕ್ಷಣದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಇಂದು ನಡೆದ ಕಾರ್ಯಕ್ರಮ ಬಂಗಾರದ ಹಬ್ಬಕ್ಕೆ ಮುನ್ನುಡಿಯಾಗಲಿ, ಶತ ಶತಮಾನದ ಸಂಭ್ರಮ ಆಚರಣೆಯೂ ಆಗಲಿ ಎಂದರು.

ಜನಮಾನಸದಲ್ಲಿ ಕಾರ್ಯಕ್ರಮ ಅಚ್ಚಳಿಯದೇ ಉಳಿಯಬೇಕು ಎಂಬ ಚಿಂತನೆಯಲ್ಲಿ ನಡೆದಿದೆ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಸಂಸ್ಥೆಯ ಸಾರ್ಥಕ ಬುದುಕು, ವಿಚಾರ ಚಿಂತನೆ ಕಳೆದ 25 ವರ್ಷಗಳಿಂದ ಸಾಧನೆ ಮಾಡಿರುವ ಕಾಲಘಟ್ಟದಲ್ಲಿದೆ. 25 ವರ್ಷದ ಹಿಂದೆ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ ಚಿಗುರೊಡೆದು ಇಂದು ಒಂದೂವರೆ ಸಾವಿರ ಮಕ್ಕಳನ್ನು ಹೊಂದಿದೆ. ಈ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಜನಮಾನಸದಲ್ಲಿ ಈ ಕಾರ್ಯಕ್ರಮ ಉಳಿಸಬೇಕು ಎಂಬ ಆಲೋಚನೆಯಲ್ಲಿ ನಡೆದಿದೆ. ಜಾತಿ-ಮತ-ಬೇಧವಿಲ್ಲದೆ ಸರ್ವರನ್ನೂ ಗುರುತಿಸಬೇಕೆಂಬ ಸಂಕಲ್ಪ ಮಾಡಿದಂತೆ ಆಗಿದೆ ಎಂದ ಅವರು, ಮುಂದೆ 50ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕ ಮಂಗಳೂರಿನಲ್ಲಿ ನಡೆಯಲಿದೆ. ತುಲಾಭಾರ ಸೇವೆ ನಡೆಯಲಿದೆ ಎಂದರು.

ಸರಕಾರ ಪ್ರಾಥಮಿಕ , ಪ್ರೌಢಶಾಲೆ ಜತೆಗೆ ಕನ್ನಡವನ್ನು ಉಳಿಸುವ ಕೆಲಸ ಬದ್ಧತೆಯಿಂದ ಮಾಡಬೇಕಾಗಿದೆ : ಡಾ.ಕೆ.ಚಿನ್ನಪ್ಪ ಗೌಡ

ಮಂಗಳೂರು ವಿವಿ ಉಪಕುಲಪತಿ, ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತ  ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ, ಪ್ರಸ್ತುತ ಸರಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ಸರಕಾರಿ, ಖಾಸಗಿ, ಅನುದಾನಿತ ಶಾಲೆ ಖಾಸಗಿಯವರು ಶಿಕ್ಷಣ ಸಂಸ್ಥೆ ತೆರೆದರು.  ಶಿಕ್ಷಣ ಕೊಟ್ಟರು. ಅದು ಪ್ರಸ್ತುತ ಮಾಧ್ಯಮ ಹೋಗಿ ಉದ್ಯಮ ಆಗುತ್ತಿದೆ. ಹೀಗಾಗಬಾರದು. ಪ್ರಾಥಮಿಕ , ಪ್ರೌಢಶಾಲೆ ಜತೆಗೆ ಕನ್ನಡವನ್ನು ಉಳಿಸುವ ಕೆಲಸವನ್ನು ಬದ್ಧತೆಯಿಂದ ಮಾಡಬೇಕಾಗಿದೆ ಎಂದ ಅವರು, 40 ಸಾವಿರ ಅಧ್ಯಾಪಕರ ಕೊರತೆ ಇದೆ ಎಂದಾದರೆ ಶಿಕ್ಷಣದ ವ್ಯವಸ್ಥೆ ಹೇಗಿರಬಹುದು ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಸರಕಾರ 75 ವರ್ಷ ಪೂರೈಸಿದ ಶಾಲೆಗಳಿಗೆ ಮೇಸ್ಟ್ರುಗಳನ್ನು ಕೊಡಿ. ಈ ಮೂಲಕ ಕನ್ನಡವನ್ನು ಉಳಿಸಿ  ಬೆಳೆಸಬೇಕು ಎಂದು ಹೇಳಿದರು.

ಜ್ಞಾನ ಹಾಗೂ ಮಾನವೀಯತೆ ಆಧಾರದಲ್ಲಿ ಸಮಾಜ ಕಟ್ಟಲು ಸಾಧ್ಯ : ಡಾ.ಭರತ್ ವೈ ಶೆಟ್ಟಿ

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಸಮಾಜವನ್ನು ಜ್ಞಾನ ಹಾಗೂ ಮಾನವೀಯತೆ ಆಧಾರದಲ್ಲಿ ಕಟ್ಟಲು ಸಾಧ್ಯ. ಜ್ಞಾನ, ಮಾನವೀಯತೆ ಇರುವುದು ಸನಾತನ ಧರ್ಮದ ಸಂಸ್ಕೃತಿಯಲ್ಲಿ. ಸತ್ಯಾನ್ವಷೇಣೆಯಲ್ಲಿ ತೊಡಗಿಕೊಂಡಿರುವವರ ಪುಣ್ಯ ಭೂಮಿ ಭಾರತ. ಸಮಾಜದಲ್ಲಿ ನ್ಯೂನತೆ, ವ್ಯತ್ಯಾಸ ಬಂದರೆ ಅದರನ್ನು ಬದಲಾಯಿಸಬೇಕು ಎಂಬ ನಿಟ್ಟಿನಲ್ಲಿ ಸಂತರು ಮಾರ್ಗದರ್ಶನ ನೀಡುತ್ತಾರೆ. ಸಮಾಜವನ್ನು ಉದ್ಧಾರ ಮಾಡಬೇಕು, ಸೋಶೀಯಲ್ ರಿಸೋರ್ಸ್ ಮಾಡಬೇಕಾದ್ದನ್ನು ಇಂದು ಮಂಗಳೂರು ಶಾಖಾ ಮಠ ಮಾಡುತ್ತಿದೆ ಎಂದರು.

ಶ್ರೀ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ  ಗುಣನಾಥ ಸ್ವಾಮೀಜಿ ಆಶೀರ್ವಚ ನೀಡಿದರು. ಸಮಾರಂಭದಲ್ಲಿ ದ.ಕ.ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ಮಂದಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ಮೇಯರ್ ಸುಮಂಗಳಾ, ಹೊಸದಿಗಂತ ಪತ್ರಿಕೆಯ ಪ್ರಕಾಶ್‍, ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top