ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಅಸಮಾಧಾನ
ಬೆಂಗಳೂರು: ಕಾಂಗ್ರೆಸ್ ಸರಕಾರ ಉಪಚುನಾವಣೆಯ ಕ್ಲೀನ್‌ಸ್ವೀಪ್ ಗೆಲುವಿಗೆ ಪಂಚ ಗ್ಯಾರಂಟಿಗಳೇ ಕಾರಣ ಎಂದು ಹೇಳುತ್ತಿದ್ದರೂ ಗ್ಯಾರಂಟಿಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಆಕ್ಷೇಪ ಎತ್ತಲು ತೊಡಗಿದ್ದಾರೆ. ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಗವಿಯಪ್ಪ ಹೇಳಿದ್ದಾರೆ.
ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಶಾಸಕ ಎಚ್.ಆರ್ ಗವಿಯಪ್ಪ ಹೊಸಪೇಟೆ ಪಾಲಿಗೆ ಶಾಪವಾಗಿದ್ದಾರೆ ಎಂದು ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಕಿಡಿಕಾರಿದ್ದರು. ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿರುವ ನಡುವೆಯೇ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರ ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನುದಾನವಿಲ್ಲದೆ ಜನರ ಆಕ್ರೋಶಕ್ಕೆ ತುತ್ತಾಗುವ ಭೀತಿಯಲ್ಲಿ ಗವಿಯಪ್ಪ ಸೇರಿ ಹಲವು ಶಾಸಕರು ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.