ಹಿಂದುಗಳ ಪರವಾಗಿ ಹೋರಾಡುತ್ತಿದ್ದ ಧಾರ್ಮಿಕ ನಾಯಕನನ್ನು ಕ್ಷುಲ್ಲಕ ಕೇಸ್ ಹಾಕಿ ಬಂಧಿಸಿದ ಪೊಲೀಸರು
ಢಾಕಾ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ, ಇಸ್ಕಾನ್ ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನವನ್ನು ವಿರೋಧಿಸಿ ಹಿಂದುಗಳು ನಿನ್ನೆ ರಾತ್ರಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದ ಹಲವೆಡೆ ಹಿಂದುಗಳು ಬೀದಿಗಿಳಿದು ಮೆರವಣಿಗೆ, ಧರಣಿ ನಡೆಸಿದ್ದು, ಈ ಸಂದರ್ಭದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ನಿನ್ನೆ ಸಂಜೆ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದೇಶ ತೊರೆಯಲು ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ಬ್ರಹ್ಮಚಾರಿ ಅವರನ್ನು ಯಾವುದೇ ಕಾರಣ ನೀಡದೆ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಕಳೆದ ತಿಂಗಳು ಹಿಂದುಗಳು ನಡೆಸಿದ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕೇಸನ್ನು ಅವರ ವಿರುದ್ಧ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಂಗ್ಲಾದ ಢಾಕಾ, ಚಿತ್ತಗಾಂಗ್ ಮತ್ತಿತರ ನಗರಗಳಲ್ಲದೆ ದಕ್ಷಿಣ ಏಷ್ಯಾದ ಕೆಲವು ದೇಶಗಳಲ್ಲೂ ಹಿಂದುಗಳು ಬ್ರಹ್ಮಚಾರಿ ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಢಾಕಾದಲ್ಲಿ ರಾತ್ರಿಯಿಡೀ ಪ್ರತಿಭಟನೆ ನಡೆದಿದೆ. ಢಾಕಾದಲ್ಲಿ ರಸ್ತೆತಡೆ ನಡೆಸಿ ಬ್ರಹ್ಮಚಾರಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹಿಂದುಗಳು ಆಗ್ರಹಿಸಿದ್ದಾರೆ.
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಅಲ್ಲಿ ಶೇಖ್ ಹಸೀನಾ ಅವರನ್ನು ಓಡಿಸಿ ಮೂಲಭೂತವಾದಿಗಳು ಅಧಿಕಾರ ಕೈಗೆತ್ತಿಕೊಂಡ ಬಳಿಕ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಇದರ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಬ್ರಹ್ಮಚಾರಿ ಮುಂಚೂಣಿಯಲ್ಲಿದ್ದರು. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ.