25,000 ಕೋ.ರೂ. ಮೌಲ್ಯದ ಮಾದಕ ವಸ್ತು ವಶ

ದೋಣಿ ಮೂಲಕ ಭಾರತಕ್ಕೆ ಬರುತ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್‌

ಹೊಸದಿಲ್ಲಿ : ಭಾರತೀಯ ಕೋಸ್ಟ್ ಗಾರ್ಡ್ ಪಡೆ ಅಂಡಮಾನ್ ದ್ವೀಪದ ಸಮೀಪ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯೊಂದರಿಂದ ಸುಮಾರು 5500 ಕೆಜಿ (5.5 ಟನ್) ತೂಕದ ಮಾದಕವಸ್ತು ವಶಪಡಿಸಿಕೊಂಡಿದೆ. ಇದರ ಬೆಲೆ 25,000 ಕೋಟಿ ರೂ. ಆಗಿದೆ. ಈ ಡ್ರಗ್ಸ್‌ ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ದೊಡ್ಡ ಪ್ರಮಾಣದ ಮಾದಕ ದ್ರವ್ಯ ವಶವಾಗಿರುವುದು ಡ್ರಗ್ಸ್‌ ವಿರುದ್ಧ ಸರಕಾರ ನಡೆಸುತ್ತಿರುವ ಹೋರಾಟದ ಬದ್ಧತೆಗೆ ಸಾಕ್ಷಿಯಾಗಿದೆ. ಡ್ರಗ್ಸ್‌ ಜಾಲನ್ನು ಬೇರು ಸಮೇತ ಕಿತ್ತು ಹಾಕಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಎರಡು ಕಿಲೋ ತೂಕದ ಡ್ರಗ್ಸ್‌ನ ಮೂರು ಸಾವಿರ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಸ್ಟ್‌ಗಾರ್ಡ್‌ನ ಡೋರ್ನಿಯರ್ ವಿಮಾನವು ಅನುಮಾನಾಸ್ಪದ ದೋಣಿಯನ್ನು ಗುರುತಿಸಿ ತಕ್ಷಣ ಹತ್ತಿರದ ಕಮಾಂಡ್‌ಗೆ ತಿಳಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.



































 
 

ಗಸ್ತು ಹಡಗುಗಳು ಧಾವಿಸಿ ದೋಣಿಯನ್ನು ಹತ್ತಿರದ ದ್ವೀಪಕ್ಕೆ ಎಳೆದೊಯ್ದಿವೆ. ಇದರಲ್ಲಿದ್ದ ಆರು ಮಂದಿ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಮೆಥಾಂಫೆಟಮೈನ್ ಎಂದು ಹೇಳಲಾಗಿದೆ. ಜಂಟಿ ವಿಚಾರಣೆಗಾಗಿ ಅಂಡಮಾನ್- ನಿಕೋಬಾರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಹೊಸ ವರ್ಷಾಚರಣೆ ಸಲುವಾಗಿ ಈ ಮಾದಕ ವಸ್ತುವನ್ನು ಭಾರತಕ್ಕೆ ತಂದಿರುವ ಸಾಧ್ಯತೆಯಿದೆ. ಇದು ಅಂತಾರಾಷ್ಟ್ರೀಯ ಡ್ರಗ್‌ ಜಾಲಕ್ಕೆ ಸೇರಿದ ಸರಕಾಗಿರಬಹುದು ಎಂಬ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top