ಹೊಸ ದಾಖಲೆ ಬರೆದ ಕೆ.ಎಲ್ ರಾಹುಲ್ – ಯಶಸ್ವಿ ಜೈಸ್ವಾಲ್ ಜೋಡಿ
ಪರ್ತ್: ಪರ್ತ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನ ವೈಫಲ್ಯಗಳನ್ನೆಲ್ಲ ಮೆಟ್ಟಿನಿಂತು ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕದ ಜೊತೆಯಾಟವಾಡುವ ಮೂಲಕ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಲೆಜೆಂಡ್ ಸುನಿಲ್ ಗವಾಸ್ಕರ್ – ಶ್ರೀಕಾಂತ್ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.
ದ್ವಿತೀಯ ಇನಿಂಗ್ಸ್ನಲ್ಲಿ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 201 ರನ್ಗಳ ಜೊತೆಯಾಟವಾಡಿದ್ದಾರೆ. ಈ ಪಾಲುದಾರಿಕೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ದ್ವಿಶತಕದ ಜೊತೆಯಾಟವಾಡಿದ ಭಾರತದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆರಂಭಿಕ ಜೋಡಿಯ ದಾಖಲೆ ಸುನಿಲ್ ಗವಾಸ್ಕರ್ ಹಾಗೂ ಕ್ರಿಸ್ ಶ್ರೀಕಾಂತ್ ಹೆಸರಿನಲ್ಲಿತ್ತು. 1986ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈ ಜೋಡಿಯು ಮೊದಲ ವಿಕೆಟ್ಗೆ 191 ರನ್ ಕಲೆಹಾಕಿ ಇತಿಹಾಸ ನಿರ್ಮಿಸಿತ್ತು. 38 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಟೀಮ್ ಇಂಡಿಯಾದ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 150 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ 104 ರನ್ಗಳಿಗೆ ಸರ್ವಪತನ ಕಂಡಿತು. 46 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಕೆ.ಎಲ್ ರಾಹುಲ್ (77) ವಿಕೆಟ್ ಕಳೆದುಕೊಂಡು 240 ರನ್ (75 ಓವರ್ಗಳು) ಕಲೆಹಾಕಿ 286 ರನ್ಗಳ ಮುನ್ನಡೆಯಲ್ಲಿದೆ.