ವೋಟ್‌ಬ್ಯಾಂಕ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ನಿಂದ ವಕ್ಫ್ ಮಂಡಳಿ ರಚನೆ ಎಂದು ಮೋದಿ ವಾಗ್ದಾಳಿ
ಹೊಸದಿಲ್ಲಿ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಭರ್ಜರಿ ಗೆಲುವು ಬಿಜೆಪಿಯ ವಕ್ಫ್ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರ ವಕ್ಫ್ ಕಾಯಿದೆ ತಿದ್ದಪಡಿಯತ್ತ ಮೊದಲ ಹೆಜ್ಜೆಯಿಟ್ಟಿದ್ದು, ಇದಕ್ಕಾಗಿ ಜೆಪಿಸಿಯನ್ನೂ ರಚನೆ ಮಾಡಿದೆ. ಇದೇ ವೇಳೆ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಕ್ಫ್ ಮಂಡಳಿ ಇದ್ದ ಜಮೀನುಗಳನ್ನೆಲ್ಲ ತನ್ನದು ಎಂದು ಹೇಳುತ್ತಿರುವುದು ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಸಿಕ್ಕಿದ ದೊಡ್ಡಮಟ್ಟದ ಗೆಲುವು ಬಿಜೆಪಿಯ ವಾದಕ್ಕೆ ಬಲ ತುಂಬಿದೆ. ನಿನ್ನೆ ರಾತ್ರಿ ವಿಜಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ವಕ್ಫ್ ಮತ್ತು ಅದನ್ನು ರಚನೆ ಮಾಡಿದ ಕಾಂಗ್ರೆಸ್ ವಿರುದ್ಧ ನೇರ ದಾಳಿ ಮಾಡುವ ಮೂಲಕ ವಕ್ಫ್ ವಿರುದ್ಧದ ಹೋರಾಟ ತೀವ್ರಗೊಳ್ಳುವ ಸೂಚನೆ ನೀಡಿದ್ದಾರೆ.
ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ಹೆಚ್ಚಿಸಲು ವಕ್ಫ್ ಮಂಡಳಿ ರಚನೆ ಮಾಡಿದೆ ಎಂದು ಕರ್ನಾಟಕದ ವಕ್ಫ್ ವಿವಾದ ಉಲ್ಲೇಖಿಸಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರ ಜಯಭೇರಿ ಹಿನ್ನೆಲೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಉದಾಹರಣೆ ವಕ್ಫ್ ಬೋರ್ಡ್. 2014ರಲ್ಲಿ ಸರ್ಕಾರವನ್ನು ತೊರೆಯುವ ಮೊದಲು ಕಾಂಗ್ರೆಸ್‌ನವರು ದಿಲ್ಲಿ ಮತ್ತು ಸುತ್ತಮುತ್ತಲಿನ ಅನೇಕ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್‌ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರವಿಲ್ಲದೆ ಕಾಂಗ್ರೆಸ್ ಕುಟುಂಬ ಬದುಕಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಬಹುದು. ಇಂದು, ಕಾಂಗ್ರೆಸ್‌ನ ನಗರ ನಕ್ಸಲಿಸಂ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಅರ್ಬನ್ ನಕ್ಸಲೀಯರ ರಿಮೋಟ್ ಕಂಟ್ರೋಲ್ ದೇಶದ ಹೊರಗಿದ್ದು, ಈ ಅರ್ಬನ್ ನಕ್ಸಲಿಸಂ ಬಗ್ಗೆ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕಿದೆ. ಇಂದು ದೇಶದ ಯುವಜನತೆ, ಪ್ರತಿಯೊಬ್ಬರೂ ಕಾಂಗ್ರೆಸ್‌ನ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಮೋದಿ ಎಚ್ಚರಿಸಿದ್ದಾರೆ.
ಇಡೀ ದೇಶದಲ್ಲಿ ಒಂದೇ ಒಂದು ಸಂವಿಧಾನ ಕೆಲಸ ಮಾಡುತ್ತದೆ. ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ಭಾರತದ ಸಂವಿಧಾನ. ದೇಶದಲ್ಲಿ ಎರಡು ಸಂವಿಧಾನಗಳ ಬಗ್ಗೆ ಯಾರೇ ಮಾತನಾಡಿದರೂ ದೇಶ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯ ಗೋಡೆಯನ್ನು ನಿರ್ಮಿಸಲು ಪ್ರಯತ್ನಿಸಿದವು. ಇದು ಕೆಲಸ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಅವರಿಗೆ ಸ್ಪಷ್ಟವಾಗಿ ಹೇಳಿದೆ. ಈಗ ವಿಶ್ವದ ಯಾವುದೇ ಶಕ್ತಿಯು 370ನೇ ವಿಧಿಯನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಮಹಾರಾಷ್ಟ್ರ ಎಲ್ಲ ದಾಖಲೆಗಳನ್ನು ಮುರಿದಿದೆ. ಕಳೆದ 50 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಕೂಟಕ್ಕೆ ದೊರೆತ ಅತಿ ದೊಡ್ಡ ಗೆಲುವು ಇದಾಗಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮಹಾರಾಷ್ಟ್ರ ಸತತ ಮೂರನೇ ಬಾರಿ ಆಶೀರ್ವಾದ ಮಾಡಿದೆ. ಮಹಾರಾಷ್ಟ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ. ಬಿಜೆಪಿಗೆ ಸತತ ಮೂರು ಬಾರಿ ಜನಾದೇಶ ನೀಡಿದ ದೇಶದ ಆರನೇ ರಾಜ್ಯ ಮಹಾರಾಷ್ಟ್ರ ಎಂದು ಮೋದಿ ಬಣ್ಣಿಸಿದರು.