ಪುತ್ತೂರು: ಭಜನಾ ಪರಿಷತ್ ಪುತ್ತೂರು ಹಾಗೂ ಪುತ್ತೂರಿನ ವಿವಿಧ ಹಿಂದೂ ಸಂಘಟನೆಗಳ ಮತ್ತು ಭಜಕರ ಸಹಕಾರದಲ್ಲಿ ಬೃಹತ್ ಭಜಕರ ಸಮಾವೇಶ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ನಡೆಯಿತು.
ಸಮಾವೇಶದ ಮೊದಲು ನಗರದ ದರ್ಬೆ ವೃತ್ತದಿಂದ ಭಜನಾ ಸಂಕೀರ್ತನೆಯ ಕುಣಿತದ ಮೂಲಕ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಜಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಹಾಗೂ ಭಜನಾ ತಂಡದ ಮಹಿಳೆಯರನ್ನು ನಿಂದನೆ ಮಾಡುವವರಿಗೆ ಸದ್ಭುದ್ಧಿ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ಭಜಕರ ಸಹಿ ಸಂಗ್ರಹಿಸಲಾಯಿತು. ಸಂಗ್ರಹವಾದ ಸಹಿಯ ಪ್ರತಿಯನ್ನು ನ.25 ರಂದು ಪುತ್ತೂರು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿ, ಭಜನೆ ಕುರಿತು ನಿಂದನೆ ಮಾಡುವವರ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ ಉಪನ್ಯಾಸ ನೀಡಿ, ಭಜನೆ ನಮ್ಮ ನೆಲದ ಸಾಂಸ್ಕೃತಿಕ, ಆಧ್ಯಾತಿಕ ನಂಬಿಕೆಯ ಗುರುತು. ಭಜನೆ ಹಾಗೂ ಅದರ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಾಯಂದಿರ ಕುರಿತು ಅವಮಾನಿಸುವವರಿಗೆ ವಿವೇಚನೆಯಿಂದ ವರ್ತಿಸುವ ಬುದ್ಧಿಯನ್ನು ಆ ದೇವರೇ ನೀಡುತ್ತಾರೆ ಎಂದ ಅವರು, ದೇವರಿಗೆ ಕೃತಜ್ಞತೆ, ಪ್ರಾರ್ಥನೆ ಸಲ್ಲಿಸಲು ಭಜನೆ ಉತ್ತಮ ಮಾರ್ಗ. ಲಕ್ಷಾಂತರ ಮಂದಿಯಲ್ಲಿ ಜೀವನದ ನೈತಿಕತೆಯನ್ನು ಕಟ್ಟಿಕೊಡುವಲ್ಲಿ ಭಜನೆ ಪ್ರಭಾವ ಬೀರಿದೆ. ಜಾತಿ, ಪ್ರಾಂತ್ಯ ಎಲ್ಲವನ್ನೂ ಮೀರಿ ವಿಭಜನೆಯನ್ನು ದೂರ ಮಾಡಿ ಪ್ರತಿ ವ್ಯಕ್ತಿಯಲ್ಲಿ ಪರಿಸರ, ಮನಸ್ಸನ್ನು ನಿಗ್ರಹಿಸುವ ಶಕ್ತಿಯನ್ನು ಭಜನೆ ನೀಡುತ್ತದೆ. ಸುತ್ತಮುತ್ತ ಮಂಗಳಕರ ವಾತಾವರಣಕ್ಕೆ ಪ್ರೇರೇಪಿಸುತ್ತದೆ ಎಂದರು.
ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲ ಮಾಡುವವರಿಗೆ ಕಾನೂನಿನ ಶಿಕ್ಷೆ ಪಾಠ ಆಗಬೇಕು. ಹೆಣ್ಣನ್ನು ಅವಮಾನ ಮಾಡಿದರೆ ಆಕೆ ಹಿಂದಡಿಯಿಡುತ್ತಾಳೆ ಎನ್ನುವ ತಪ್ಪು ಕಲ್ಪನೆ ಇದರ ಹಿಂದೆ. ಆದರೆ ಹೆಣ್ಣು ಇದರಿಂದ ಮತ್ತಷ್ಟು ಗಟ್ಟಿಯಾಗಬೇಕು. ಇಡೀ ಸ್ತ್ರೀಕುಲದ ನಿಂದನೆಗೆ ಪ್ರತಿರೋಧ ತೋರುವ ಮೂಲಕ ದೊಡ್ಡ ಸಂದೇಶವನ್ನು ನಿಂದಕರಿಗೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಭಜನ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಮಾತನಾಡಿ, ಪ್ರತಿ ಮನೆಗಳಲ್ಲಿ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯ ಮಾಡುವ ಭಜನೆ ಮತ್ತು ಅದರಲ್ಲಿ ತೊಡಗಿಸಿಕೊಂಡಿರುವ ತಾಯಂದಿರ ಕುರಿತು ನಿಂದಿಸುವವರನ್ನು ಒಂದು ಹಂತದವರೆಗೆ ಸಹಿಸಿಕೊಂಡಿದ್ದೇವೆ. ಒಂದು ಲಕ್ಷ ಸಹೋದರಿಯರು, ತಾಯಂದಿರ ಶಾಪ ತಟ್ಟಿದರೆ ನಿಂದಿಸಿದಾತ ಹುಚ್ಚರಂತೆ ಭಜನೆ ಹಾಡುತ್ತಾ ಊರೂರು ಅಲೆದಾಡುವ ದಿನ ಬರಬಹುದು ಎಂದು ಎಚ್ಚರಿಕೆ ನೀಡಿದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಭಜನ ಪರಿಷತ್ ಕಾಯಾಧ್ಯಕ್ಷ ಧನ್ಯಕುಮಾರ್ ಬೆಳಿಯೂರು, ಭಜನಾ ಪರಿಷತ್ ಸಮನ್ವಯಕಾರ ಸಂತೋಷ್ ಕುಮಾರ್, ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಭಜನ ಪರಿಷತ್ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಎಂ. ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.