ಕಾನೂನು ಶಿಕ್ಷಣ ಎಂಬುದು ಎಲ್ಲದರ ಮೂಲ: ಕೃಷ್ಣವೇಣಿ ಪ್ರಸಾದ್ ಮುಳಿಯ
ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕಲಾವಿಸ್ಮಯ-2024’ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಮುಳಿಯ ಜುವೇಲರ್ಸ್ ನ ನಿರ್ದೇಶಕಿ ಹಾಗೂ ‘ಪಾಂಚಜನ್ಯ’ ರೇಡಿಯೋದ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ಕಾನೂನು ಶಿಕ್ಷಣ ತಾಯಿಯಿದ್ದಂತೆ. ಕಾನೂನು ಶಿಕ್ಷಣ ಎಂಬುದು ಎಲ್ಲದರ ಮೂಲವಾಗಿದೆ. ಕಾನೂನು ಸರಿಯಾಗಿದ್ದರೇ ಮಾತ್ರ ದೇಶದ ಭವಿಷ್ಯ ಉತ್ತಮ ರೀತಿಯಲ್ಲಿ ರೂಪುಗೊಳ್ಳಲು ಸಾಧ್ಯವಿದೆ. ಅಂತಹ ಕಾನೂನು ಶಿಕ್ಷಣ ಪಡೆಯುವ ನಿಮ್ಮಲ್ಲಿ ಉತ್ಸಹ ಹಾಗೂ ಸದಾ ಕಲಿಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಕಾನೂನು ಶಿಕ್ಷಣದ ಜೊತೆಗೆ ಮೌಲ್ಯ ಹಾಗೂ ಭಾರತೀಯ ಸಂಸ್ಕೃತಿಯ ಅರಿವನ್ನು ಕಾನೂನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಜೊತೆಗೆ ಇಂತಹ ಪ್ರತಿಭಾ ದಿನಾಚರಣೆಯು ಒಬ್ಬ ವಿದ್ಯಾರ್ಥಿಯ ಒಳಗಿರುವ ಪ್ರತಿಭೆಯನ್ನು ಹೊರತೆಗೆದು ಪರಿಪೂರ್ಣನನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು. ಜೊತೆಗೆ ವಿವೇಕಾನಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿ ತನ್ನ ಅನುಭವಗಳನ್ನು ಹಂಚಿಕೊಂಡ ಅವರು, ಜಾನಪದ ಗೀತೆಯನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಪ್ರಮಿತಾ ಸಿ. ಹಾಸ್ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಮಹತ್ವದ ಜವಾಬ್ದಾರಿ ಇಂದಿನ ಯುವಜನರಲ್ಲಿ ಬೆಳೆಸಬೇಕಾಗಿದೆ. ಅದಕ್ಕಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಸಲಾಗುವ ಭಾರತೀಯ ಜನಪದ ಸಂಸ್ಕೃತಿಯನ್ನು ಸಾರುವ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನ್ವೇಷಿಸಲು ಈ ರೀತಿಯ ಸ್ಪರ್ಧೆಗಳು ಸಹಾಯ ಮಾಡುತ್ತದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ಸಾಂಸ್ಕೃತಿಕ ಸಂಘದ ಸಂಯೋಜಕರಾದ ಡಾ. ರೇಖಾ ಕೆ. ಹಾಗೂ ಶೈನಿ ವಿಜೇತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರಿಷೇಲ್ ಪಿಂಟೋ ಸ್ವಾಗತಿಸಿ, ವಿದ್ಯಾರ್ಥಿ ಚಿಂತನ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ತರಗತಿಗಳ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.