ಮಂಗಳೂರು: ಉಳ್ಳಾಲ ತಾಲೂಕಿನ ಬಾಳೆಪುಣಿ ಎಂಬಲ್ಲಿ 70 ವರ್ಷದ ವೃದ್ಧ ಮೂರು ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ವೃದ್ಧ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಪುತ್ತೂರು ನಿವಾಸಿ, ಪ್ರಸ್ತುತ ಮುದುಂಗಾರುಕಟ್ಟೆಯಲ್ಲಿ ವಾಸವಾಗಿರುವ ಅಬ್ದುಲ್ಲಾ (70) ಆರೋಪಿ. ಮಗು ಆಟವಾಡುತ್ತಿದ್ದಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ ಎಂದು ಬಾಲಕಿಯ ತಾಯಿ ಕೊಣಾಜೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಅಬ್ದುಲ್ಲನ ವಿರುದ್ಧ ಪೋಕ್ಸೋ ಅನ್ವಯ ಕೇಸ್ ದಾಖಲಾಗಿದೆ.