ಬೆಂಗಳೂರು: ಭೋವಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಎದುರಿಸಿದ್ದ ಯುವತಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಭವಿಸಿದ್ದು, ತನಿಖೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಕೆ ಮಾಡಿದ್ದ ಪದ್ಮನಾಭ ನಗರದ ಜೀವಾ (32) ಎಂಬ ಯುವತಿ ಪದ್ಮನಾಭ ನಗರದ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೀವಾ ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಮೂರು ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಬಳಿಕ ಕಳೆದ ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆಗೆ ಹಾಜರಾಗಿದ್ದರು. ಗುರುವಾರ ವಿಚಾರಣೆ ಎದುರಿಸಿ ಬಂದ ನಂತರ, ಪ್ರಕರಣದ ತನಿಖಾಧಿಕಾರಿಗಳು ವಿಚಾರಣೆ ವೇಳೆ ನನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ 11 ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಅಕ್ರಮದ ತನಿಖೆ ನಡೆಸುತ್ತಿರುವ ಡಿವೈಎಸ್‌ಪಿ ಹೆಸರು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.