ಇಸ್ಲಾಮಾನಾದ್: ಪಾಕಿಸ್ಥಾನದಲ್ಲಿ ನಾಗರಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿದ್ದು, 50 ಜನರು ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಕರ್ರಂ ಜಿಲ್ಲೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಪರಾಚಿನಾರ್ನಿಂದ ಖೈಬರ್ ಪಖ್ತೂನ್ಖ್ವಾದ ರಾಜಧಾನಿ ಪೇಷಾವರ್ ಕಡೆಗೆ ಹೊರಟಿದ್ದ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಎಂಟು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರ ಪೈಕಿ ಶಿಯಾ ಸಮುದಾಯಕ್ಕೆ ಸೇರಿದವರು ಹೆಚ್ಚಿನವರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖೈಬರ್ ಪಖ್ತೂನ್ಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಖಾನ್ ಗಂದಾಪುರ್ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಾಂತ್ಯದ ಎಲ್ಲಾ ರಸ್ತೆಗಳನ್ನು ಸುರಕ್ಷಿತವಾಗಿರಿಸುವಂತೆ ಪೊಲೀಸರಿಗೆ ಸೂಚಿಸಿದ್ದು, ಪ್ರಾಂತೀಯ ಹೆದ್ದಾರಿ ಪೊಲೀಸ್ ಘಟಕವನ್ನು ಸ್ಥಾಪಿಸುವಂತೆ ತಿಳಿಸಿದ್ದಾರೆ.