ಗಡಿಭಾಗಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ
ಕಾರ್ಕಳ : ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲ್ ನಾಯಕ ವಿಕ್ರಂ ಗೌಡನ ಸಹಚರರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಬ್ರಿಯ ಪೀತಬೈಲಿನಲ್ಲಿ ಎನ್‌ಕೌಂಟರ್ ನಡೆಯುವ ಸಂದರ್ಭದಲ್ಲಿ ವಿಕ್ರಂ ಗೌಡನ ಜೊತೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ. ಅವರು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಎಎನ್‌ಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇವರಲ್ಲದೆ ನಕ್ಸಲ್ ತಂಡದಲ್ಲಿ ಇನ್ನೂ ಕೆಲವರಿದ್ದು, ಒಟ್ಟು ಆರು ಮಂದಿ ಬಂದಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್ ಹಾಕಿ ಕಣ್ಗಾವಲು ಇರಿಸಲಾಗಿದೆ.
ಕೆರೆಕಟ್ಟೆ, ಸಂಪಾಜೆ ಮತ್ತಿತರೆಡೆಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ದ್ವಿಚಕ್ರವೂ ಸೇರಿದಂತೆ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ. ಈ ನಡುವೆ ವಿಕ್ರಂ ಗೌಡನ ಎನ್‌ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆತಂಕದಲ್ಲಿ ಜನ
ವಿಕ್ರಂ ಗೌಡ ಜತೆಗೆ ಬಂದಿದ್ದ ಇತರ ನಕ್ಸಲರು ಪರಾರಿಯಾಗಿರುವುದು ಪೀತಬೈಲು ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಎಎನ್‌ಎಫ್ ಕೂಂಬಿಂಗ್ ತೀವ್ರಗೊಳಿಸಿದೆ. ತಪ್ಪಿಸಿಕೊಂಡ ನಕ್ಸಲರ ಜಾಡು ಹಿಡಿದು ಶೋಧ ಕಾರ್ಯ ನಡೆಯುತ್ತಿದೆ. ಹಿರಿಯ ಎಎನ್‌ಎಫ್ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲು, ನಾಡ್ಪಾಲ್, ಕೂಡ್ಲು ಅರಣ್ಯವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದಾರೆ. ಕಾಡಿಗೆ ಹೋಗದಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ.
ಕಬ್ಬಿನಾಲೆ ಅರಣ್ಯ ವ್ಯಾಪ್ತಿಗೆ ಪ್ರವೇಶಿಸುವ ಮುನ್ನ ನಕ್ಸಲರು ಈದು ಗ್ರಾಮ, ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲುರು ಮಲೆ ಪ್ರದೇಶ, ಕೊಡುಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಭಾಗದ ಕಾಡುಗಳಲ್ಲೂ ಎಎನ್‌ಎಫ್ ಕೂಂಬಿಂಗ್ ನಡೆಸುತ್ತಿದೆ.
ಕೊಡಗಿಗೆ ಹೋಗಿರುವ ಅನುಮಾನ
ತಪ್ಪಿಸಿಕೊಂಡ ನಕ್ಸಲರ ಗುಂಪು ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಯಿರುವ ಶಂಕೆ ವ್ಯಕ್ತವಾಗಿದ್ದು, ನಕ್ಸಲ್ ನಿಗ್ರಹ ದಳ ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಕೊಡಗು ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ.
ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ನಾಕಾಬಂಧಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವಾಹನವನ್ನೂ ತಪಾಸಣೆ ನಡೆಸುತ್ತಿದ್ದಾರೆ. ನಕ್ಸಲರು ಹಿಂದೆ ಓಡಾಟ ನಡೆಸಿದ್ದ ಸ್ಥಳಗಳಲ್ಲಿಯೂ ಕೊಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ ಆಕ್ರೋಶ
ಈ ನಡುವೆ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ ಇದು ನಕಲಿ ಎನ್‌ಕೌಂಟರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕ್ರಂ ಗೌಡನ ಹತ್ಯೆ ತೀವ್ರ ಖಂಡನೀಯ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎನ್‌ಕೌಂಟರ್ ಸಮರ್ಥಿಸಿಕೊಂಡಿರುವುದು ದುರದೃಷ್ಟಕರ ಎಂದು ನಿಲಗುಳಿ ಪದ್ಮನಾಭ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿಕ್ರಂ ಗೌಡನ ಹತ್ಯೆ ಯಾರೂ ಒಪ್ಪುವಂತದ್ದಲ್ಲ. ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಪ್ಪುವುದಿಲ್ಲ. ಪೊಲೀಸರ ಎನ್‌ಕೌಂಟರ್ ಕಥೆ ಗೊತ್ತಿರುವವರು ಯಾರೂ ಇದನ್ನು ಎನ್‌ಕೌಂಟರ್ ಎಂದು ಒಪ್ಪಿಕೊಳ್ಳುವುದಿಲ್ಲ. ಪ್ರಜಾತಂತ್ರವಾದಿಗಳು ಒಪ್ಪುವ ವಿಚಾರವೇ ಅಲ್ಲ. ಕಪೋಲಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್‌ಕೌಂಟರ್. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಪೀತಬೈಲಿಗೆ ತಂದು ಮೃತದೇಹ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ, ಯಾರಿಗೂ ಮುಖ ತೋರಿಸದೆ, ಎಲ್ಲ ವಿಚಾರಗಳಲ್ಲಿ ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಸಂವಿಧಾನ ಕೂಡ ಹೇಳಿಲ್ಲ. ವಿಕ್ರಂ ಗೌಡನ ಎನ್‌ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ನಕ್ಸಲರಿಗೆ ಮುಖ್ಯವಾಹಿನಿಗೆ ಬನ್ನಿ ಅನ್ನುತ್ತೆ. ಬಂದರೆ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ. ಕನ್ಯಾಕುಮಾರಿ ಮುಖ್ಯವಾಹಿನಿಗೆ ಬಂದು 8 ವರ್ಷವಾಯ್ತು. ನಾನು ಅತಿಕಷ್ಟದಲ್ಲಿದ್ದೇನೆ. ಮನೆ ಕೊಡಲಿಲ್ಲ, ನನ್ನ ಗುಡಿಸಲಿಗೆ ಕರೆಂಟ್ ಕೊಡ್ಲಿಲ್ಲ. ಕೇಸ್‌ಗಳು ಹಾಗೆಯೇ ಇವೆ. ವಾರಕ್ಕೆ ಮೂರು-ನಾಲ್ಕು ದಿನ ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಕನ್ಯಾಕುಮಾರಿ ಏಳೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇದು ಮುಖ್ಯವಾಹಿನಿನಾ? ಜೈಲಿನಲ್ಲಿರೋದು ಮುಖ್ಯವಾಹಿನಿಯಾ ಎಂದು ಪ್ರಶ್ನಿಸಿದ್ದಾರೆ.