ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳಿಸಿದ ಹಣವೆಲ್ಲ ಸೈಬರ್‌ ವಂಚಕರ ಪಾಲು

ಮಂಗಳೂರು : ಸೈಬರ್‌ ವಂಚನೆಗಳ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನರು ಇನ್ನೂ ಮೋಸ ಹೋಗುವುದು ನಿಂತಿಲ್ಲ. ಅದರಲ್ಲೂ ಬ್ಯಾಂಕ್‌, ಐಟಿ ಉದ್ಯೋಗಿಗಳಂತ ವಿದ್ಯಾವಂತರೇ ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿರುವುದು ನಿತ್ಯ ಸಂಭವಿಸುತ್ತಿರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ಇದೇ ಮಾದರಿಯ ವಂಚನೆಯೊಂದು ನಡೆದಿದ್ದು, ಅಮೆರಿಕದಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮುಂಬಯಿಯ ವ್ಯಕ್ತಿಯೊಬ್ಬರು ಬರೋಬ್ಬರಿ 1.71 ಕೋ. ರೂ. ಕಳೆದುಕೊಂಡು ಪರಿತಪಿಸುತ್ತಿದ್ದಾರೆ.

ನ. 11ರಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ನಿಂದ ಕರೆ ಮಾಡಿರುವುದಾಗಿ ಹೇಳಿಕೊಂಡು ಬಂದ ಅಪರಿಚಿತ ಕರೆಯೊಂದರಿಂದ ಈ ವಂಚನೆ ಜಾಲ ಶುರುವಾಗಿದೆ. ಕರೆ ಮಾಡಿದ ವ್ಯಕ್ತಿ ಮೊಬೈಲ್ ಸಿಮ್ ಖರೀದಿ ಮಾಡಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ಹೆದರಿಸಿದ್ದಾನೆ.
ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟ್ರರ್ ಆಗಿದೆ. ಮುಂಬಯಿಯ ಅಂಧೇರಿ (ಪೂ)ದಲ್ಲಿ ಅದರ ಮೂಲಕ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದ.































 
 

ಬಳಿಕ ದೂರುದಾರರು ಅಪರಿಚಿತ ವ್ಯಕ್ತಿ ಪ್ರದೀಪ್ ಸಾವಂತ್ ಎಂಬಾತನಲ್ಲಿ ಮಾತನಾಡಿದ್ದು, ನರೇಶ್ ಗೋಯೆಲ್ ವಂಚನೆ ಪ್ರಕರಣವನ್ನು ಒಳಗೊಂಡಿರುವ ಮನಿ ಲ್ಯಾಂಡರಿಂಗ್ ಯೋಜನೆಯಲ್ಲಿ ಭಾಗಿಯಾಗಿರುವುದರಿಂದ ಇನ್ನೊಂದು ಎಫ್‌ಐಆರ್ ದಾಖಲಾಗಿದೆ. ಅಂಧೇರಿಯ ಬ್ಯಾಂಕ್‌ನ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಅದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದೆ. ಹೀಗಾಗಿ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದ.

ಬಳಿಕ ರಾಹುಲ್ ಕುಮಾರ್ ಎಂಬಾತ ಪೊಲೀಸ್ ಅಧಿಕಾರಿ ಮತ್ತು ಆಕಾಂಕ್ಷ ಎಂಬ ಮಹಿಳೆ ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ವಾಟ್ಸಾಪ್ ನಲ್ಲಿ ವೀಡಿಯೊ ಕರೆ ಮಾಡಿದ್ದಾರೆ. ಆಕಾಂಕ್ಷ ಎಂಬಾಕೆ ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ದೂರುದಾರರ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದಳು. ಈ ಪ್ರಕರಣದಿಂದ ಹೊರಬರಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಅದರಂತೆ ದೂರುದಾರರು ನ.13ರಿಂದ 19ರ ನಡುವೆ 53 ಲಕ್ಷ ರೂ., 74 ಲಕ್ಷ ರೂ., 44 ಲಕ್ಷ ರೂ. ಹೀಗೆ ಒಟ್ಟು 1.71 ಕೋ.ರೂ. ವರ್ಗಾಯಿಸಿದ್ದರು.

ದೂರುದಾರರು ಮೂಲತಃ ಮುಂಬಯಿಯವರಾಗಿದ್ದು, ಈ ಮೊದಲು ಅಮೆರಿಕದ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಂದ ಮರಳಿದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಖರೀದಿಸಿ ವಾಸವಾಗಿದ್ದರು. ಅವಿವಾಹಿತರಾಗಿರುವ ಅವರು ಒಬ್ಬರೇ ಇದ್ದರು. ಅಮೆರಿಕದಲ್ಲಿ ಉದ್ಯೋಗ ಮಾಡಿ ಉಳಿತಾಯ ಮಾಡಿದ ಹಣವನ್ನೆಲ್ಲ ಕಳೆದುಕೊಂಡು ಈಗ ಪರಿತಪಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top