ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಮತ ಎಣಿಕೆ ನಾಳೆ
ಕುತೂಹಲ ಕೆರಳಿಸಿದ ಕರ್ನಾಟಕದ ಮೂರು ಕ್ಷೇತ್ರಗಳು
ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ, ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಇದರ ಜೊತೆಗೆ ನಡೆದಿರುವ ಕೆಲವು ರಾಜ್ಯಗಳ ಉಪಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ದೇಶದಲ್ಲಿ ಈಗಾಗಲೇ ಈ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭೆಗಳಿಗೆ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ 30ಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳಿಗೆ ಮತ್ತು ಮಹಾರಾಷ್ಟ್ರದ ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಸಲಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ ಎಂಬ ಲೆಕ್ಕಾಚಾರ ಜೋರಾಗಿದೆ.
ಎನ್‌ಡಿಎ ಕಿಂಗ್ ಎಂದ ಸಮೀಕ್ಷೆಗಳು
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗೆ ಮತದಾನ ಮುಗಿದ ಬೆನ್ನಿಗೆ ಪ್ರಕಟವಾಗಿರುವ ಬಹುತೇಕ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುವ ಭವಿಷ್ಯ ನುಡಿದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಶಿವಸೇನೆ ಮತ್ತು ಎನ್‌ಸಿಪಿಯನ್ನೊಳಗೊಂಡಿರುವ ಮಹಾಯುತಿ ಮತ್ತು ಶಿವಸೇನೆ (ಉದ್ಧವ ಬಣ) ನೇತೃತ್ವದ ಕಾಂಗ್ರೆಸ್ ಮತ್ತು ಎನ್‌ಸಿಪಿ ಶರದ್ ಪವಾರ್ ಬಣಗಳ ನಡುವೆ ತೀವ್ರ ಹಣಾಹಣಿಯಿದ್ದರೂ ಎನ್‌ಡಿಎ ಸರಳ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಜಾರ್ಖಂಡ್‌ನಲ್ಲಿ ಎನ್‌ಡಿಎಗೆ ನಿಚ್ಚಳ ಬಹುಮತ ಸಿಗಲಿದೆ ಎಂದಿವೆ.
ಆದರೆ ಕಳೆದ ಲೋಕಸಭಾ ಚುನಾವಣೆ ಮತ್ತು ಬಳಿಕ ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಸಮೀಕ್ಷೆಗಳು ಬುಡಮೇಲಾಗಿ ಅನಿರೀಕ್ಷಿತ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈಗ ಸಮೀಕ್ಷೆಗಳ ಮೇಲೆ ಯಾರಿಗೂ ಪೂರ್ಣ ನಂಬಿಕೆಯಿಲ್ಲ. ಹೀಗಾಗಿ ನಾಳೆ ಫಲಿತಾಂಶ ಪ್ರಕಟವಾದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.
ಕರ್ನಾಟಕದಲ್ಲಿ ಯಥಾಸ್ಥಿತಿ
ಸಮೀಕ್ಷೆಗಳ ಪ್ರಕಾರ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಅಂದರೆ ಈಗ ಇರುವ ಪಕ್ಷಗಳ ಅಭ್ಯರ್ಥಿಗಳೆ ಅಲ್ಲಿ ಗೆಲ್ಲಲಿದ್ದಾರೆ, ಹೀಗಾದರೆ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮೊದಲ ಚುನಾವಣಾ ಗೆಲುವು ದಾಖಲಿಸಿದ್ದಾರೆ ಎಂಬ ಕಾರಣಕ್ಕಷ್ಟೇ ಈ ಚುನಾವಣೆ ವಿಶೇಷ ಎನಿಸುತ್ತದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿಯಾಣದಲ್ಲಿ ಎಕ್ಸಿಟ್‌ಪೋಲ್‌ನಲ್ಲಿ ಏನಾಯಿತು? ಅದನ್ನು ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಉಪಚುನಾವಣೆ ಬಗ್ಗೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತ ಬಿಜೆಪಿ ಮತ್ತು ಜೆಡಿಎಸ್ ಕೂಡ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಶಿಗ್ಗಾಂವಿ ಬಿಜೆಪಿ ಮತ್ತು ಚನ್ನಪಟ್ಟಣ ಜೆಡಿಎಸ್ ಕೈಯಲ್ಲೇ ಇದೆ. ಆದರೆ ಕಾಂಗ್ರೆಸ್ ಕೈಯಲ್ಲಿರುವ ಸಂಡೂರನ್ನು ಕಿತ್ತುಕೊಳ್ಳಲು ಸಾಧ್ಯವಾದರೆ ಅದು ಕಾಂಗ್ರೆಸ್‌ಗೆ ನೀಡುವ ದೊಡ್ಡ ಹೊಡೆತವಾಗಲಿದೆ. ಈ ಕಾರಣಕ್ಕೆ ಸಂಡೂರು ಫಲಿತಾಂಶ ಹೆಚ್ಚು ಕುತೂಹಲ ಕೆರಳಿಸಿದೆ.