ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಾನದ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಮಹೇಂದ್ರ ಕೊಲ್ಲಾಜೆಪಳಿಕೆ ಎಂಬವರಿಗೆ ಯಾತ್ರಾರ್ಥಿಗಳು ಹಲ್ಲೆ ನಡೆಸಿದ ಘಟನೆ ನ.20ರಂದು ನಡೆದಿದೆ.
ಹಲ್ಲೆಗೊಳಗಾದ ಮಹೇಂದ್ರ ಕೊಲ್ಲಾಜೆಪಳಿಕೆ ಅವರ ತಲೆಗೆ ಗಂಭೀರ ಏಟಾಗಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಚ್ಚತಾ ಸಿಬ್ಬಂದಿಯಾದ ಮಹೇಂದ್ರ ಅವರು ತನ್ನ ಮೊಬೈಲನ್ನು ಶೌಚಾಲಯದ ಒಳಗಿಟ್ಟು, ಸ್ವಚ್ಚತೆಗೊಳಿಸುತ್ತಿದ್ದ ಸಂದರ್ಭ ದೇವಸ್ಥಾನಕ್ಕೆ ಯಾತ್ರಾರ್ಥಿಯಾಗಿ ಬಂದವರು ಹಲ್ಲೆ ನಡೆಸಿದರೆನ್ನಲಾಗಿದೆ. ಘಟನೆಗೆ ಸ್ಪಷ್ಠ ಕಾರಣ ತಿಳಿದು ಬಂದಿಲ್ಲ. ಆದರೆ ಶೌಚಾಲಯದಲ್ಲಿ ಮೊಬೈಲ್ ಇರುವುದನ್ನು ಕಂಡ ಯಾತ್ರಾರ್ಥಿಗಳು ವಿಡಿಯೋ ಮಾಡುತ್ತಿದ್ದಾನೆ ಎಂದು ಸಂಶಯಿಸಿ ಹಲ್ಲೆ ನಡೆಸಿದ್ದಾರೆ.
ಧರ್ಮಸ್ಥಳ ಪೋಲಿಸರು ಸ್ಥಳಕ್ಕೆ ಆಗಮಿಸಿ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.