ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಮಂಜೂರಾದ ಜಮೀನು ರದ್ದುಪಡಿಸಿ ಪ್ರಿಯದರ್ಶಿನಿ ಚಾರಿಟೇಬಲ್‍ ಟ್ರಸ್ಟ್ ಗೆ ಮಂಜೂರು ಹುನ್ನಾರ | ಸರಕಾರಿ ಜಾಗ ಕಬಳಿಕೆಗೆ ಯತ್ನ : ಶಾಸಕ ಸಂಜೀವ ಮಠಂದೂರು

ಪುತ್ತೂರು :  ಪುತ್ತೂರು ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪುತ್ತೂರು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ಮಾಡುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಬಿಜೆಪಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,  ವಕ್ಫ್ ನಂತೆ ಸರಕಾರಿ ಜಮೀನನ್ನು ನುಂಗುವ ಕೆಲಸ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ವಿಧಾನಸೌಧದ ಜಾಗವನ್ನು ಕಬಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸುವ ಯತ್ನವನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಹಿಂದೊಮ್ಮೆ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಹೃದಯ ಭಾಗದ ವ್ಯಾಲ್ಯುವೇಬಲ್ ಜಾಗವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಮಂಜೂರು ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದೀಗ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಹೆಸರಿನ ಮೂಲಕ ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸಿ, ಬಳಿಕ ಕಾಂಗ್ರೆಸ್ ಪಕ್ಷದ ಕಚೇರಿಗೆ ಸ್ಥಳಾಂತರಿಸುವ ಹುನ್ನಾರದ ಅನುಮಾನ ವ್ಯಕ್ತಪಡಿಸಿದರು.































 
 

ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಗೆ ಸಂಬಂಧಿಸಿ ಪುತ್ತೂರು ಕಸಬಾ ಗ್ರಾಮದ ಸ.ನಂ 131/14A1 ರಲ್ಲಿ 0.80 ಎಕ್ರೆ ಜಮೀನು ಸಾರ್ವಜನಿಕ ಆಸ್ಪತ್ರೆಗೆ ಆಗಸ್ಟ್ 25, 2021 ರಲ್ಲಿ LND (3)CR 129/20-21 ರಂತೆ ಮಂಜೂರಾಗಿತ್ತು. ಇದಲ್ಲದೆ ಇದರ ಸುತ್ತ ಮುತ್ತಲಿನ ಮತ್ತು ಈ ಜಾಗ ಸೇರಿ ಸುಮಾರು 6.00 ಎಕ್ರೆ ಜಮೀನು ಕೂಡ ಸಾರ್ವಜನಿಕ ಆಸ್ಪತ್ರೆ ಉದ್ದೇಶಕ್ಕೆ ಪಹಣಿ ರಚಿಸಿ ಮೀಸಲಾಗಿದ್ದು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಒಳ್ಳೆಯ ಅಂಶವಾಗಿರುತ್ತದೆ. ಇತ್ತೀಚೆಗೆ ಒಂದು ಪ್ರಕಟಣೆಯನ್ನು ನೋಡಿದಾಗ ಒಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನುಗಳ ಪೈಕಿ ಪುತ್ತೂರು ಕಸಬಾ ಗ್ರಾಮದ ಸ.ನಂ 131/1441 ರಲ್ಲಿ 0.10 ಎಕ್ರೆ ಜಮೀನನ್ನು ಕಂದಾಯ ಇಲಾಖೆಯು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದಕ್ಕೆ ಮಂಜೂರು ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿ ಕಂದಾಯ ಇಲಾಖೆಯು ಇದನ್ನು ತರಾತುರಿಯಲ್ಲಿ ಮಂಜೂರು ಮಾಡುವ ಹಂತದವರೆಗೆ ಕಾರ್ಯ ಪ್ರವೃತಿಯಾದಂತೆ ಕಾಣುತ್ತಿದೆ ಎಂದರು.

ಜುಲೈ 16, 2024ಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸದ್ರಿ ಟ್ರಸ್ಟ್ ಗೆ ಜಮೀನು ನೀಡುವ ಬಗ್ಗೆ ಕ್ರಮ ವಹಿಸಲು ಕಂದಾಯ ಇಲಾಖೆ ಹಾಗೂ ಡಿಸಿಗೆ ಆದೇಶಿಸಿದ್ದಾರೆ. ಇದಾದ 4 ತಿಂಗಳ ಒಳಗಾಗಿ ಸದ್ರಿ ಜಮೀನಿನ ಮಂಜೂರಾತಿ ಮಾಡಲು ಜರೂರು ತುರ್ತಾಗಿ ಮುಂದಾಗಿದ್ದು ನೋಡಿದರೆ ಇದರ ಹಿಂದೆ ಯಾವುದೋ ಪ್ರಭಲವಾದ ಶಕ್ತಿ ಇದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಒಂದು ಸಾರ್ವಜನಿಕ ಸರಕಾರಿ ಆಸ್ಪತ್ರೆ ಉದ್ದೇಶಕ್ಕೆ ಮೀಸಲಾದ ಜಮೀನನ್ನು ಪುತ್ತೂರು ತಾಲೂಕಿನಲ್ಲಿಯೇ ಪರಿಚಯ ಇಲ್ಲದ ಒಂದು ಖಾಸಗಿ ಟ್ರಸ್ಟ್ ಗೆ ಮೀಸಲು ಮಾಡುವ ವಿಚಾರ ಬಹಳ ಖೇದಕರ ಮತ್ತು ಇದಕ್ಕೆ ಮುಖ್ಯಮಂತ್ರಿಗಳು ಶಿಫಾರಸ್ಸು ನೀಡಿರುವುದು ಇದು ಸರಕಾರಿ ಜಮೀನುಗಳನ್ನು ಕಬಳಿಸುವ ಒಂದು ಹುನ್ನಾರ ಎಂದು ಕಾಣುತ್ತಿದೆ ಎಂದರು.

ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಯಾರದ್ದು? ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳು ಯಾರು ? ಅದರ ಕಾರ್ಯವ್ಯಾಪ್ತಿ ಏನು ? ಅದು ಪುತ್ತೂರು ತಾಲೂಕಿನಲ್ಲಿ ನಡೆಸಿದ ಜನಪರ ಕಾರ್ಯಗಳು ಏನು ? ಸದರಿ ಟ್ರಸ್ಟ್ ಇದರ ಉದ್ದೇಶ ಏನು ? ಸದರಿ ಟ್ರಸ್ಟ್ ಇದಕ್ಕೆ ಸಾರ್ವಜನಿಕ ಆಸ್ಪತ್ರೆಗೆ ಮೀಸಲಾದ ಜಮೀನನ್ನು ನೀಡಬೇಕಾದ ಅಗತ್ಯತೆ ಏನು ? ಸರಕಾರಿ ಇಲಾಖೆಗಳಿಗೆ ಸ್ವಂತ ಸೂರು ಇಲ್ಲದ ಸಮಯದಲ್ಲಿ ಖಾಸಗಿ ಟ್ರಸ್ಟ್ ಗೆ ಸಾರ್ವಜನಿಕ ಆಸ್ಪತ್ರೆಯ ಜಮೀನನ್ನು ರದ್ದು ಪಡಿಸಿ ನೀಡುವ ಅಗತ್ಯತೆ ಏನಿದೆ.? ಈ ಮೊದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಹಲವಾರು ಖಾಸಗಿ ಟ್ರಸ್ಟ್ ಗಳು, ಇಲಾಖೆಗಳು, ಸಮುದಾಯದ ಅರ್ಜಿಗಳನ್ನು ಕಂದಾಯ ಇಲಾಖೆಯು ಇಷ್ಟು ತ್ವರಿತವಾಗಿ ಯಾಕೆ ವಿಲೇಮಾಡಲು ಬಯಸಲಿಲ್ಲ? ಈ ಹಿಂದೆಯೇ ಅರ್ಜಿ ನೀಡಿದ ಸಂಸ್ಥೆಗಳ, ಸಮುದಾಯಗಳ ಇಲಾಖೆಗಳ ಅರ್ಜಿಗಳನ್ನು ಬದಿಗಿರಿಸಿ ಈ ಖಾಸಗಿ ಟ್ರಸ್ಟ್ ಇದಕ್ಕೆ ಯಾಕೆ ಜಮೀನು ನೀಡಲು ಕಂದಾಯ ಇಲಾಖೆ ಮುಂದಾಗಿದೆ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಭವಿಷ್ಯದಲ್ಲಿ ತುರ್ತು ಮತ್ತು ವಿಶೇಷ ಚಿಕಿತ್ಸಾ ಘಟಕಗಳಿಗೆ ಅನಿವಾರ್ಯವಾಗಿ ಈಗ ಕಾಯ್ದಿರಿಸಿರುವ ಜಮೀನು ಅಗತ್ಯ ಇದೆ. ಅಲ್ಲದೆ ಈಗ ಇರುವ ಆಸ್ಪತ್ರೆಯ ಜಮೀನಿಗೆ ಸಂಬಂಧಿಸಿ ಇರುವಂತೆ ಇತರೆ ಹೆಚ್ಚುವರಿ ಜಮೀನುಗಳು ಸರಕಾರಿ ಆಸ್ಪತ್ರೆ ಬಳಿ ಇರುವುದಿಲ್ಲ ಒಂದೇ ಕಡೆ ಹೆಚ್ಚಿನ ಚಿಕಿತ್ಸೆ ಲಭ್ಯವಾಗಿ ಪುತ್ತೂರಿನಿಂದ ಮಂಗಳೂರಿಗೆ ಓಡುವುದನ್ನು ತಪ್ಪಿಸಲು ಇಲ್ಲಿಗೆ ಅನೇಕ ಚಿಕಿತ್ಸಾ ವ್ಯವಸ್ಥೆಯನ್ನು ಮಂಜೂರು ಮಾಡಿಸಲು , ವಿಶೇಷ ಸೌಲಭ್ಯವನ್ನು ಒದಗಿಸಲು ಈ ಕಾಯ್ದಿರಿಸಿದ ಜಾಗ ಬಹಳ ಅಗತ್ಯ ಆಗಿರುತ್ತದೆ. ಈಗಿನ ಸರಕಾರಿ ಆಸ್ಪತ್ರೆಗೆ ಹೆಬ್ಬಾಗಿಲಿನಂತಿರುವ ಜಮೀನನ್ನು ಖಾಸಗಿ ಟ್ರಸ್ಟ್ ಗೆ ನೀಡುವುದು ಬಹಳ ತಪ್ಪು ಇದನ್ನು ಖಂಡಿಸುತ್ತೇವೆ ಎಂದರು.

ಮೆಡಿಕಲ್ ಕಾಲೇಜಿನ ಕನಸು ಕಾಣುವ ಪುತ್ತೂರು ಜನತೆಗೆ ಇದು ಬಹಳ  ದುಃಖದ ವಿಚಾರ. ಇಂತಹ ಸರಕಾರ / ಜನಪ್ರತಿನಿಧಿ/ ಕಂದಾಯ ಇಲಾಖೆಯ ಕಾರ್ಯದಿಂದ ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆಯಾಗುತ್ತಿದೆ. ಸರಕಾರಿ ಆಸ್ಪತ್ರೆಯ ಜಮೀನನ್ನೇ ಮಾರಾಟ ಮಾಡುವ ಉದ್ದೇಶ ಹೊಂದಿರುವವರಿಂದ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕನಸಿನ ಮಾತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಬಿ. ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ನಗರಸಭೆ ಅಧ್ಯಕ್ಷೆ ಲೀಲಾವತಿ, ಸ್ಥಾಯಿ ಸಮಿತಿ ಅಧ್ಯಕ್ಚ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top