ಆನ್‌ಲೈನ್ ಅಭಿಪ್ರಾಯ ಸಂಗ್ರಹ ವೇಳೆ ಸಚಿವರನ್ನು ಕೆಣಕಿದ ವಿದ್ಯಾರ್ಥಿ
ಬೆಂಗಳೂರು : ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಓರ್ವ ವಿದ್ಯಾರ್ಥಿ ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು, ಇದರಿಂದ ಕೆಂಡಾಮಂಡಲವಾದ ಮಧು ಬಂಗಾರಪ್ಪ ಆ ವಿದ್ಯಾರ್ಥಿಯನ್ನು ಹುಡುಕಿ ಕ್ರಮ ಕೈಗೊಳ್ಳಬೇಖೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ನಡೆದಿದೆ.
ಬುಧವಾರ ವಿಧಾನಸೌಧದಲ್ಲಿ ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಉದ್ಘಾಟನೆ ಮುಗಿದು ಆನ್‌ಲೈನ್‌ನಲ್ಲಿ ಸಂವಾದ ನಡೆಸುವಾಗ ಓರ್ವ ವಿದ್ಯಾರ್ಥಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ ಎಂದು ಹೇಳಿದ್ದನು. ಇದರಿಂದ ಮಧು ಬಂಗಾರಪ್ಪ ಅವಮಾನಕ್ಕೀಡಾಗಿ ಆಕ್ರೋಶಗೊಂಡಿದ್ದಾರೆ.
ಕಾರ್ಯಕ್ರಮಲ್ಲಿ ಸಚಿವರು ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಈ ವೇಳೆ ಆನ್‌ಲೈನ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂತ ಹೇಳಿದ್ದಾನೆ.
ವಿದ್ಯಾರ್ಥಿ ಹೇಳಿಕೆಯನ್ನು ಆರಂಭದಲ್ಲಿ ತಮಾಷೆಯಾಗಿ ತೆಗೆದುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಂತರ ವಿದ್ಯಾರ್ಥಿ ವಿರುದ್ಧ ಗರಂ ಆಗಿ, ಈಗ ನಾನೇನು ಉರ್ದುವಿನಲ್ಲಿ ಮಾತನಾಡುತ್ತಿದ್ದೇನಾ? ಸ್ಟುಪಿಡ್. ಯಾರು ಹಾಗೆ ಹೇಳಿದ್ದು, ಮಾಹಿತಿ ತೆಗದುಕೊಳ್ಳಿ ಸುಮ್ಮನೆ ಬಿಡಬೇಡಿ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಸೂಚನೆ ನೀಡಿದರು.
ಶಿಕ್ಷಣ ಸಚಿವರ ಈ ಆದೇಶಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ. ಇದು ಅಕ್ಷರಶಃ ನಮ್ಮ ಅವಿದ್ಯಾವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅನ್ವಯಿಸುತ್ತದೆ. ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಅವರೆ ಹಿಂದೊಮ್ಮೆ ಹೇಳಿದ್ದರು, ಅದನ್ನೇ ವಿದ್ಯಾರ್ಥಿಯೊಬ್ಬ ನೆನಪಿಸಿದ ತಕ್ಷಣ, ಆ ವಿದ್ಯಾರ್ಥಿ ಸೇರಿದಂತೆ ಅಲ್ಲಿನ ಶಿಕ್ಷಕರು ಹಾಗೂ ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿರುವುದು ನಿಜಕ್ಕೂ ಸ್ಟುಪಿಡ್. ಕಾಂಗ್ರೆಸ್ಸಿಗರ ಈ ರೀತಿಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದೆ.
ತನ್ನ ಕನ್ನಡ ಅಜ್ಞಾನದಿಂದಾಗಿ ಮಧು ಬಂಗಾರಪ್ಪ ಈ ಹಿಂದೆಯೂ ಹಲವು ಸಲ ಮುಜುಗರಕ್ಕೀಡಾಗಿದ್ದಾರೆ. ಅವರ ವಿರುದ್ಧ ಅನೇಕ ಟೀಕೆಗಳೂ ಕೇಳಿಬಂದಿವೆ.