ಅಬಕಾರಿ ಹಗರಣ : ಸಚಿವ ತಿಮ್ಮಾಪುರ ತಲೆದಂಡ?

ಅಧಿವೇಶನದಲ್ಲಿ ಮುಜುಗರದಿಂದ ಪಾರಾಗಲು ಸಚಿವರನ್ನು ಕೈಬಿಡುವ ಕುರಿತು ಚಿಂತನೆ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಮದ್ಯ ವ್ಯಾಪಾರಿಗಳು ಗಂಭೀರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವ ಕುರಿತು ಚಿಂತನೆ ನಡೆಯುತ್ತಿದೆ.

ಅಬಕಾರಿ ಇಲಾಖೆಯ ಭ್ರಷ್ಟಾಚಾರ ಇತ್ತೀಚೆಗೆ ಬಹಳ ಸದ್ದು ಮಾಡಿದೆ. ಮದ್ಯ ವ್ಯಾಪಾರಿಗಳು ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಿಗೆ ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ವಿಷಯ ಪ್ರಸ್ತಾಪಿಸಿದ್ದರು.































 
 

ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ ಅಸಮಾಧಾನ ವ್ಯಕ್ತಪಡಿಸಿದೆ. ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಸುವುದು ನಿಶ್ಚಿತ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ ಬರೀ ಒಂದೂವರೆ ವರ್ಷದಲ್ಲಿ 700 ಕೋ. ರೂ. ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ಆರೋಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೂ ಮೊದಲೇ ತಿಮ್ಮಾಪುರ ಅವರ ಖಾತೆಯನ್ನು ಬೇರೆಯವರಿಗೆ ನೀಡುವ ಸಾಧ್ಯತೆಯಿದೆ ಅಥವಾ ಅದಕ್ಕಿಂತ ಮುಂಚೆಯೇ ಖಾತೆಯಿಂದ ಅವರನ್ನು ಕಿತ್ತುಹಾಕಬಹುದು ಎಂದು ಹೇಳಲಾಗುತ್ತಿದೆ.

ಅಬಕಾರಿ ಇಲಾಖೆಯ ಭ್ರಷ್ಟಾಚಾರ ವಿರೋಧಿಸಿ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ​​ಆಫ್ ಕರ್ನಾಟಕ ನ.20ರಂದು ಮದ್ಯದಂಗಡಿಗಳ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಗಿತ್ತು. ಈ ಸಭೆಯಲ್ಲೇ ಸಚಿವ ಆರ್‌.ಬಿ.ತಿಮ್ಮಾಪುರ ನೀಡುತ್ತಿರುವ ಕಿರುಕುಳದ ಕುರಿತು ಮದ್ಯ ವ್ಯಾಪಾರಿಗಳು ಮುಖ್ಯಮಂತ್ರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ ನಾಯಕರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಸಂಗ್ರಹವಾದ ಹಣವನ್ನು ಮಹಾರಾಷ್ಟ್ರದ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top