ವಂಚನೆ ಪ್ರಕರಣ : ಗೌತಮ್‌ ಅದಾನಿ ವಿರುದ್ಧ ಅರೆಸ್ಟ್‌ ವಾರಂಟ್‌ | ಅಮೆರಿಕದಲ್ಲಿ ಅದಾನಿ ಸೇರಿ ಎಂಟು ಮಂದಿ ವಿರುದ್ಧ ಕೇಸ್‌ ದಾಖಲು

ನ್ಯೂಯಾರ್ಕ್ : ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಸೇರಿ ಎಂಟು ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಕೇಸ್‌ ದಾಖಲಾಗಿದ್ದು, ಅರೆಸ್ಟ್‌ ವಾರಂಟ್‌ ಹೊರಡಿಸಲಾಗಿದೆ. ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಅದಾನಿ ವಿರುದ್ಧ ಕೇಳಿಬಂದಿದೆ. ಕೆನಡಾದ ಪೆನ್ಶನ್ ಫಂಡ್ ಆದ ಸಿಡಿಪಿಕ್ಯೂನ ಮಾಜಿ ಎಂಡಿ, ಹಾಗೂ ಅಜುರೆ ಪವರ್ ಸಂಸ್ಥೆಯ ಮಾಜಿ ಎಕ್ಸಿಕ್ಯೂಟಿವ್ ಸೈರಿಲ್ ಕೆಬನೆಸ್ ಅವರೂ ಆರೋಪಿಗಳ ಪೈಕಿ ಒಬ್ಬರು. ಗೌತಮ್ ಅದಾನಿ, ಸೈರಿಲ್ ಕೆಬನೆಸ್ ಅವರಲ್ಲದೆ, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿರುವ ಇತರ ವ್ಯಕ್ತಿಗಳು.

ಅಮೆರಿಕದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಎಸ್​ಇಸಿ ನ್ಯೂಯಾರ್ಕ್​ನ ಡಿಸ್ಟ್ರಿಕ್ಟ್ ಕೋರ್ಟ್​ನಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಸಿರಿಲ್ ಕೆಬನೆಸ್ ವಿರುದ್ಧ ಸಿವಿಲ್ ಕೇಸ್‌ ಹಾಕಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಲಂಚ ನೀಡಲಾಗಿದೆ ಎಂಬುದು ಆರೋಪ. 2020-24ರ ಅವಧಿಯಲ್ಲಿ ಲಂಚಗಳನ್ನು ನೀಡಿದ ಅಥವಾ ನೀಡಲು ಯೋಜಿಸಿದ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಪ್ರಕರಣ ದಾಖಲು ಇನ್ನೊಂದು ಪ್ರಮುಖ ಕಾರಣ ಇದೆ. ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಅಮೆರಿಕದ ಹೂಡಿಕೆದಾರರಿಂದ 3 ಬಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಸಾಲ ಹಾಗೂ ಬಾಂಡ್​ಗಳನ್ನು ಪಡೆದಿದೆ. ಭಾರತದಲ್ಲಿ ಲಂಚ ನೀಡಿ ಗುತ್ತಿಗೆ ಪಡೆದ ವಿಚಾರವನ್ನು ಹೂಡಿಕೆದಾರರಿಂದ ಮುಚ್ಚಿಟ್ಟು ಅವರನ್ನು ವಂಚಿಸಲಾಗಿದೆ. ಹೂಡಿಕೆದಾರರ ಹಿತದೃಷ್ಟಿಯಿಂದ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದು ಪ್ರಾಸಿಕ್ಯೂಟರ್​​ಗಳ ವಾದವಾಗಿದೆ.
ಅಜುರೆ ಪವರ್ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಯಾಗಿತ್ತು. ಹೀಗಾಗಿ ಅಜುರೆ ಪವರ್​ನ ಅಂದಿನ ಎಕ್ಸಿಕ್ಯೂಟಿವ್ ಆಗಿದ್ದ ಸಿರಿಲ್ ಕೆಬನೆಸ್ ಅವರ ವಿರುದ್ಧವೂ ಅಮೆರಿಕದಲ್ಲಿ ಪ್ರಾಸಿಕ್ಯೂಶನ್ ಪ್ರಕ್ರಿಯೆ ಚಾಲುಗೊಂಡಿದೆ. ಅಜುರೆ ಪವರ್ ಅನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಿಂದ ಕಿತ್ತು ಹಾಕಲಾಗಿದೆ.































 
 

ಎಸ್​ಇಸಿಯ ಎನ್​ಫೋರ್ಸ್​ಮೆಂಟ್ ವಿಭಾಗಕ್ಕೆ ಭಾರತ ಮೂಲದವರೇ ಆದ ಸಂಜಯ್ ವಾಧವ ಅವರೇ ಮುಖ್ಯಸ್ಥರಾಗಿದ್ದಾರೆ. ವಾಧವಾ ಮಾಡಿರುವ ಆರೋಪದ ಪ್ರಕಾರ, ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಬಾಂಡ್​ಗಳ ಮೂಲಕ ಅಮೆರಿಕದ ಹೂಡಿಕೆದಾರರಿಂದ ಸಾಲ ಪಡೆದಿತ್ತು. ಈ ವೇಳೆ ತನ್ನ ಸಂಸ್ಥೆಯಲ್ಲಿ ಲಂಚ ವಿರೋಧಿ ಕಾನೂನು ವ್ಯವಸ್ಥೆ ಇರುವುದಾಗಿ ಹೂಡಿಕೆದಾರರಿಗೆ ಸುಳ್ಳು ಹೇಳಿತ್ತು ಎಂದಿದ್ದಾರೆ.

ಅಮೆರಿಕಲ್ಲಿ ಕೋರ್ಟ್​ನಲ್ಲಿ ಗೌತಮ್ ಅದಾನಿ ಮತ್ತಿತರರ ವಿರುದ್ಧ ಆರೋಪಗಳು ದಾಖಲಾದ ಬೆನ್ನಲ್ಲೇ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ತನ್ನ 600 ಮಿಲಿಯನ್ ಯುಎಸ್ ಡಾಲರ್ ಬಾಂಡ್​ಗಳ ವಿತರಣೆಯ ಯೋಜನೆಯನ್ನು ಕೈಬಿಟ್ಟಿದೆ. ಈ ಬಾಂಡ್​ಗಳಿಗೆ ಸಾಕಷ್ಟು ಹೂಡಿಕೆದಾರರು ಅರ್ಜಿ ಹಾಕಿದ್ದರು. ಕೋರ್ಟ್​ನಲ್ಲಿ ಪ್ರಕರಣ ಬರುತ್ತಲೇ ಸಂಸ್ಥೆ ತನ್ನ ನಡೆಯನ್ನು ಹಿಂಪಡೆದುಕೊಂಡಿದೆ. ಕೇಸ್‌ ದಾಖಲಾದ ವಿಚಾರ ಬಹಿರಂಗವಾಗುತ್ತಲೇ ಅದಾನಿ ಗ್ರೂಪ್​ನ ಬಹುತೇಕ ಎಲ್ಲ ಷೇರುಗಳು ಇಂದು ನೆಲಕಚ್ಚಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top