ಪುತ್ತೂರು: ವಕ್ಫ್ ಆಸ್ತಿ ಅಕ್ರಮದ ವಿರುದ್ಧ ಬಿಜೆಪಿ ರಾಜ್ಯಾಧ್ಯಂತ ಬೀದಿಗಿಳಿದು ಹೋರಾಟದ ಜತೆಗೆ ಸವಾಲು ಸ್ವೀಕಾರ ಮಾಡಲಿದ್ದು ನ.21 ಹಾಗೂ 22 ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರು ಮಿನಿ ವಿಧಾನಸೌಧದ ಎದುರು ‘ನಮ್ಮ ಭೂಮಿ-ನಮ್ಮ ಹಕ್ಕು’ ಎಂಬ ನಾಮಧ್ಯೇಯದೊಂದಿಗೆ ಪ್ರತಿಭಟನೆ ಮಾಡಲಿದ್ದು, ಪುತ್ತೂರಿನಿಂದ ಸುಮಾರು ಒಂದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈಗಾಗಲೇ ವಕ್ಫ್ ಆಸ್ತಿ ವಿರುದ್ಧ ನಡೆಸುವ ಸಮರದ ಕುರಿತು ರಾಜ್ಯದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ನಾರಾಯಣ ಸ್ವಾಮಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ರಾಜ್ಯಾಧ್ಯಕ್ಷ ಪ್ರವಾಸ ಮಾಡಿ ಸಾರ್ವಜನಿಕರ ಅಹಲವಾಲು ಸ್ವೀಕರಿಸುವ ಮೂಲಕ ರೈತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರವಾಸದ ಜತೆಗೆ ಡಿ.10 ರಿಂದ 20 ರ ತನಕ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಸಂದರ್ಭ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನೂ ಬಿಜೆಪಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಈಗಾಗಲೇ ವಕ್ಫ್ ಆಸ್ತಿ ಕುರಿತು ಪಹಣಿಯಲ್ಲಿ 11 ರಲ್ಲಿ ವಕ್ಫ್ ಹೆಸರಿನಲ್ಲಿದ್ದು, 9 ರಲ್ಲಿ ರೈತರ ಹೆಸರಿನಲ್ಲಿದೆ. ಕೆಲವೊಂದರಲ್ಲಿ 9 ರಲ್ಲಿ ವಕ್ಫ್ ಹೆಸರಿನಲ್ಲಿದ್ದು, 11 ರಲ್ಲಿ ರೈತರ ಹೆಸರಿನಲ್ಲಿದೆ. ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
1974 ರಲ್ಲಿ ವಕ್ಫ್ ಕುರಿತು ಗಜೆಟ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಅದನ್ನು ಸರಕಾರ ಹಿಂಪಡೆಯದೇ ಇರುವುದು ಅವಾಂತರಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಸರಕಾರ ಗಜೆಟ್ ನೋಟಿಫಿಕೇಶನ್ ಹಿಂತೆಗೆದುಕೊಳ್ಳಬೇಕು ಅಥವಾ ತಿದ್ದುಪಡಿ ಮಾಡುವ ಮೂಲಕ ರೈತರ ಹೆಸರಿಗೆ ಖಾಯಂ ಮಾಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದಲ್ಲಿ ಬಿಜೆಪಿ ರೈತರ ಪರವಾಗಿ ನಿಂತು ತೀವ್ರ ಹೋರಾಟ ಮಾಡಲಿದೆ ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಬಜೆಟ್ ಮಂಡನೆ ಸಂದರ್ಭದಲ್ಲಿ ಸರಕಾರ ಬಜೆಟ್‍ನಲ್ಲಿ 2023-24 ರಲ್ಲಿ 5 ಲಕ್ಷದ ವರೆಗೆ ಶೂನ್ಯ ಬಡ್ಡಿ ಹಾಗೂ 10 ರಿಂದ 15 ಲಕ್ಷದ ವರೆಗಿನ ಸಾಲಕ್ಕೆ 3 ಶೇ. ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಕಾರ ಸಂಘಗಳಿಗೆ ಆದೇಶ ನೀಡಿತ್ತು. ಇದು ಮೇ 27 ರ 2024 ರ ಬಜೆಟ್‍ನ ನಿರ್ಣಯವಾಗಿತ್ತು. ಆದರೆ ಬಜೆಟ್ ಮಂಡನೆಯಾಗಿ 8 ತಿಂಗಳು ಕಳೆದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾದರೆ ಈ ಆದೇಶ ಯಾಕೆ ಎಂದು ಪ್ರಶ್ನಿಸಿದ ಅವರು, ರೈತರಿಗೆ ಯಾಕೆ ಈ ರೀತಿ ಮೋಸ ಮಾಡುತ್ತಿದ್ದಾರೆ. ಇದು ರೈತರ ಮೇಲೆ ಕಿಂಚಿತ್ತೂ ಸರಕಾರಕ್ಕೆ ಕಾಳಜಿಯಿಲ್ಲ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ರೈತರನ್ನು ಶೋಷಣೆ ಮಾಡುವ ಕೆಲಸವನ್ನು ಸರಕಾರ ನೇರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. , ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಉಪಸ್ಥಿತರಿದ್ದರು.