ನೋಟಿಸ್ ಇಲ್ಲದೆ ಲೋಕಾಯುಕ್ತ ಕಚೇರಿಗೆ ಬಂದಿರುವ ಹಿನ್ನೆಲೆಯಲ್ಲಿ ಹಲವು ಅನುಮಾನ
ಮೈಸೂರು: ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ನಿನ್ನೆ ರಾತ್ರಿ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ನೋಟಿಸ್ ಇಲ್ಲದೆ ಭೇಟಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಂಚಿಕೆ ಅಕ್ರಮದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ಅವರನ್ನು ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ರಾತ್ರೋರಾತ್ರಿ ಭೇಟಿ ಮಾಡಿದ್ದಾರೆ. ಅವರನ್ನು ಲೋಕಾಯುಕ್ತರು ಭೇಟಿಗೆ ಕರೆದಿರಲಿಲ್ಲ ಎನ್ನಲಾಗಿದೆ.
ಮಂಗಳವಾರ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಲೋಕಾಯುಕ್ತ ಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಟೇಶ್ ವಿಚಾರಣೆ ಮುಗಿದ ಅರ್ಧಗಂಟೆಯ ಬಳಿಕ ಮಲ್ಲಿಕಾರ್ಜುನ ಸ್ವಾಮಿ ಅವರು ಉದೇಶ್ ಅವರನ್ನು ಭೇಟಿಯಾಗಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿ ಮುಡಾ ಹಗರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ. ರಾತ್ರಿ 7.30ಕ್ಕೆ ಲೋಕಾಯುಕ್ತ ಕಚೇರಿಗೆ ದಿಢೀರ್ ಎಂಟ್ರಿ ನೀಡಿದ ಅವರು 8 ಗಂಟೆಯವರೆಗೆ ಕಚೇರಿ ಒಳಗಡೆಯೇ ಇದ್ದರು.
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತರಿಂದ ನೋಟಿಸ್ ನೀಡಿದ್ದರೆ ಸಾಧಾರಣವಾಗಿ ಆರೋಪಿಗಳು ಹಗಲು ಹಾಜರಾಗುತ್ತಾರೆ. ಆದರೆ ಇಲ್ಲಿ ವಿಚಾರಣೆಯೂ ಇಲ್ಲ, ನೋಟಿಸ್ ಇಲ್ಲದೇ ಇದ್ದರೂ ರಾತ್ರಿ ವೇಳೆ ತನಿಖಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದರಿಂದ ರಾತ್ರೋರಾತ್ರಿ ತನಿಖಾಧಿಕಾರಿ ಭೇಟಿ ಮಾಡುವ ಅನಿವಾರ್ಯತೆ ಆರೋಪಿಗೆ ಏನಿತ್ತು? ಮಾಜಿ ಆಯುಕ್ತ ವಿಚಾರಣೆ ಮುಗಿದ ಕೂಡಲೇ ವಿಚಾರಣಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದು ಯಾಕೆ?, ರಾತ್ರಿ ವೇಳೆ ಲೋಕಾಯುಕ್ತ ಕಚೇರಿಗೆ ಬರಲು ಆರೋಪಿಗೆ ಅವಕಾಶ ಕೊಟ್ಟಿದ್ದು ಯಾರು? ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿವೆ. ಮಲ್ಲಿಕಾರ್ಜುನಸ್ವಾಮಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ.18 ರಂದು ವಿಚಾರಣೆಗೆ ಒಳಪಡಿಸಿದ್ದರು.