ತಿರುಪತಿಯಲ್ಲಿ ತಾಸುಗಟ್ಟಲೆ ಕ್ಯೂ ನಿಲ್ಲುವ ಬವಣೆ ತಪ್ಪಿಸಲು ಹೊಸ ವ್ಯವಸ್ಥೆ
ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಸರತಿ ಸಾಲಿನಲ್ಲಿ ಕಾದುನಿಲ್ಲುವ ಬವಣೆ ತಪ್ಪಲಿದೆ. ಎಲ್ಲ ಭಕ್ತರಿಗೆ ಕ್ಷಿಪ್ರವಾಗಿ ತಿಮ್ಮಪ್ಪನ ದರ್ಶನ ಸಿಗುವಂತಾಗಲು ದೇವಳದ ಆಡಳಿತ ನೋಡಿಕೊಳ್ಳುತ್ತಿರುವ ಟಿಟಿಡಿ ಹೊಸ ವ್ಯವಸ್ಥೆ ಮಾಡಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಎಷ್ಟೇ ರಶ್ ಇದ್ದರೂ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಸಾಮಾನ್ಯ ಭಕ್ತರಿಗೂ ದೇವರ ದರ್ಶನ ಮಾಡಲು ಸಾಧ್ಯವಾಗಲಿದೆ.
ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲಾಗಿದೆ.
ಟಿಟಿಡಿ ಆಡಳಿತ ಮಂಡಳಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಶ್ರೀವಾಣಿ ಟ್ರಸ್ಟನ್ನು ವಜಾಗೊಳಿಸಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯ ನೌಕರರನ್ನು ವಿಆರ್‌ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ತಿರುಮಲ ಪರಿಸರಲ್ಲಿ ರಾಜಕೀಯ ಮಾತಾಡದಂತೆ ನಿಷೇಧ ವಿಧಿಸಿದ್ದಾರೆ. ಸ್ಥಳೀಯರಿಗೆ ಪ್ರತಿ ತಿಂಗಳ ಮೊದಲ ಮಂಗಳವಾರ ದೇವರ ದರ್ಶನ ಕಲ್ಪಿಸಲು ತೀರ್ಮಾನ ತೆಗೆದುಕೊಂಡಿದೆ. ದೇವರ ದುಡ್ಡನ್ನು ಖಾಸಗಿ ಬ್ಯಾಂಕ್ ಬದಲಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಟಿಟಿಡಿ ನಿರ್ಣಯ ತೆಗೆದುಕೊಂಡಿದೆ.