ಕಾರಿನ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು
ಮುಂಬಯಿ: ವಿಧಾನಸಭೆ ಚುನಾವಣೆ ಕಾವು ತೀವ್ರವಾಗಿರುವ ಮಹಾರಾಷ್ಟ್ರದ ಕಟೋಲ್‌ನಲ್ಲಿ ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ ನಡೆದು ಅನಿಲ್ ದೇಶಮುಖ್ ಗಾಯಗೊಂಡಿದ್ದಾರೆ. ದೇಶಮುಖ್ ಅವರ ತಲೆಗೆ ಕಲ್ಲು ತಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಮಹಾರಾಷ್ಟ್ರ ಚುನಾವಣಾ ಪ್ರಚಾರದ ಕೊನೆಯ ದಿನವಾದ ಸೋಮವಾರ ಸಂಜೆ ಐದು ಗಂಟೆಗೆ ಪ್ರಚಾರ ಕೊನೆಗೊಳಿಸಿ ದೇಶ್‌ಮುಖ್ ಕಟೋಲ್‌ನಿಂದ ನಾಗ್ಪುರ ನಗರಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಅವರ ವಾಹನದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಮಾಜಿ ಗೃಹ ಸಚಿವರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಕಾರಿನ ಕಿಟಕಿ ತೆರೆದಿತ್ತು ಎಂದು ಹೇಳಲಾಗುತ್ತಿದೆ.
ದೇಶಮುಖ್ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎನ್ಸಿಪಿ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಇದಕ್ಕೆ ಉದಾಹರಣೆ ಇಂದು ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಮೇಲೆ ನಡೆದ ದಾಳಿ ಎಂದು ಹೇಳಿದೆ.
ಈ ಬಾರಿ ಶರದ್ ಪವಾರ್ ಅವರು ಕಟೋಲ್‌ನಿಂದ ಅನಿಲ್ ದೇಶಮುಖ್ ಬದಲಿಗೆ ಅವರ ಪುತ್ರ ಸಲೀಲ್ ದೇಶಮುಖ್ ಅವರನ್ನು ಕಣಕ್ಕಿಳಿಸಿದ್ದಾರೆ. ಮಗನ ಅವರ ಪರ ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದರು. 2019 ರ ಚುನಾವಣೆಯಲ್ಲಿ ಅನಿಲ್ ದೇಶಮುಖ್ ಬಿಜೆಪಿ ಅಭ್ಯರ್ಥಿ ಠಾಕೂರ್ ಚರಣ್ ಸಿಂಗ್ ಅವರನ್ನು ಸೋಲಿಸಿದ್ದರು. ಬಿಜೆಪಿ ಮತ್ತೊಮ್ಮೆ ಠಾಕೂರ್ ಚರಣ್ ಸಿಂಗ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ರಾಜ್ಯದ ಮತಗಳ ಎಣಿಕೆ ನಡೆಯಲಿದೆ.