ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ, ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ಪಟ್ಟಾಭಿಷೇಕ | ನ.26, ಜ.1.2 ರಂದು ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ : ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಮತ್ತು ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ನ.26 ಹಾಗೂ ಜನವರಿ 1 ಮತ್ತು 2ರಂದು ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಅವರು ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಭೂಪಟದಲ್ಲಿ ಶಿಕ್ಷಣ ಕಾಶಿ, ಸಾಂಸ್ಕೃತಿಕ ಶ್ರದ್ಧಾ ಕೇಂದ್ರ ಎಂದು ಗುರುತಿಸಲ್ಪಟ್ಟಿರುವ ಕರಾವಳಿ ಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆ ತೆರೆಯಬೇಕು ಎಂಬ ಉದ್ದೇಶದಿಂದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ 1996ರಲ್ಲಿ ಕಾವೂರು ಕುಂಜತ್ತಬೈಲಿನ ತೋಡ ಗುಡ್ಡದಲ್ಲಿ ಐದು ಎಕರೆ ಜಾಗ ಪಡೆಯಲಾಯಿತು. 1999ರಲ್ಲಿ ಅಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ಮಾಮೀಜಿ ಅವರು ವಿದ್ಯಾಸಂಸ್ಥೆ ಹಾಗೂ ಶಾಖಾ ಮಠ ಸ್ಥಾಪಿಸಿದ್ದರು. ಇದೀಗ ಶಾಖಾ ಮಠ ರಜತ ಮಹೋತ್ಸವ ಆಚರಿಸುತ್ತಿದೆ. ಬಿಜಿಎಸ್ ಎಜುಕೇಶನ್ ಸೆಂಟರ್(ಸಿಬಿಎಸ್‌ಇ) ಶಾಲೆ 25ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಮಿತಿ ರಚಿಸಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

1974ರಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ನಾಥ ಪರಂಪರೆಯ 71ನೇ ಪೀಠಾಧ್ಯಕ್ಷರಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಪೀಠಾರೋಹಣ ಮಾಡಿದ ಸುಸಂದರ್ಭಕ್ಕೆ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಜತೆಗೆ ಈಗಿನ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಗುರುವಂದನೆ ಹಾಗೂ ರಜತ ತುಲಾಭಾರ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.































 
 

ರಜತ ಮಹೋತ್ಸವ ಹಾಗೂ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಪ್ರಯುಕ್ತ ಜ.1 ಮತ್ತು 2ರಂದು ಕಾವೂರು ಬಿಜಿಎಸ್ ನೂತನ ಕ್ಯಾಂಪಸ್‌ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಿ.ಯು. ಕಾಲೇಜು ಕಟ್ಟಡ ಉದ್ಘಾಟನೆ, ಬಿಜಿಎಸ್ ಸುವರ್ಣ ಭವನಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ಜ.1ರಂದು ಚಂಡಿಕಾಯಾಗ ನಡೆಯಲಿದೆ. ಕಾವೂರಿನಿಂದ ಕಾಲೇಜುವರೆಗೆ ಕುಣಿತ ಭಜನೆ, ವಿವಿಧ ಕಲಾ ತಂಡಗಳೊಂದಿಗೆ ಶೋಭಾಯಾತ್ರೆ ಏರ್ಪಡಿಸಲಾಗಿದೆ ಎಂದು ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ದ.ಕ. ಜಿಲ್ಲೆಯ 19 ಕ್ಷೇತ್ರಗಳ 25 ಸಾಧಕರಿಗೆ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನ.26ರಂದು ಬೆಳಗ್ಗೆ 10.30ಕ್ಕೆ ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದರು. ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಡಾ.ಧರ್ಮ ಪಾಲನಾಥ ಸ್ವಾಮೀಜಿ ಉಪಸ್ಥಿತರಿರುವರು ಎಂದರು.

ಸಮಾರಂಭದಲ್ಲಿ ಸಾಧಕರಾದ ಡಾ.ಕೆ.ಚಿನ್ನಪ್ಪ ಗೌಡ(ಸಾಹಿತ್ಯ), ಪ್ರೊ.ಕೆ.ವಿ.ರಾವ್(ವಿಜ್ಞಾನ), ಗುರುವಪ್ಪ, ಎನ್.ಟಿ.ಬಾಳೆವುಣಿ(ಮಾಧ್ಯಮ), ಡಾ.ರಮೇಶ್ ಡಿ.ಪಿ., ಡಿರಿ.ಸತೀಶ್ ಕಲ್ಲಿಮಾರ್(ವೈದ್ಯಕೀಯ), ಪ್ರಕಾಶ್ ಅಂಚನ್ ಬಂಟ್ವಾಳ(ಶಿಕ್ಷಣ), ಮಾಧವ ಸುವರ್ಣ (ಧಾರ್ಮಿಕ), ಭಕ್ತಿ ಭೂಷಣ್‌ ದಾಸ್(ಗೋ ಸೇವೆ), ಪುಷ್ಪಾವತಿ ಬುಡ್ಡೆಗುತ್ತು (ನಾಟ ವೈದ್ಯ), ವೀಣಾ ಕುಲಾಲ್(ಸಮಾಜಸೇವೆ), ನರಸಿಂಹ ರಾವ್ ದೇವಸ್ಯ, ಡಾ.ಕೆ.ಎಸ್.ಗೋಪಾಲಕೃಷ್ಣ ಕಾಂಚೋಡು, ಸುರೇಶ್ ಬಲ್ನಾಡು(ಕೃಷಿ), ಗೋಪಾಲಕೃಷ್ಣ ಭಟ್(ಸಿನೆಮಾ), ಜಗದೀಶ್ ಆಚಾರ್ಯ(ಸಂಗೀತ), ಮಂಜುಳಾ, ಸುಬ್ರಹ್ಮಣ್ಯ (ನೃತ್ಯ), ಶಿವರಾಮ ಪಣಂಬೂರು(ಯಕ್ಷಗಾನ), ಸುಜಾತ ಮಾರ್ಲ(ಯೋಗ), ಸಚಿನ್ ಸುಂದರ ಗೌಡ, ರಾಧಾಕೃಷ್ಣ, ಕೇಶವ ಅಮ್ಮ, ಕುಸುಮಾಧರ(ಉದ್ಯಮ), ಅಭಿಷೇಕ್ ಶೆಟ್ಟಿ (ಕ್ರೀಡೆ) ಮಾಧವ ಉಳ್ಳಾಲ್(ಪರಿಸರ), ವಿಕ್ರಂ ಬಿ.ಶೆಟ್ಟಿ (ಚಿತ್ರಕಲೆ) ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಈ ಸಂದರ್ಭ ಕಾರ್ಯಕ್ರಮದ ನಿವೇದನಾ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್.ಪ್ರಕಾಶ್, ಸಮಿತಿ ಉಪಾಧ್ಯಕ್ಷರಾದ ಹರಿನಾಥ್, ಕಿರಣ್ ಬುಡ್ಡೆ ಗುತ್ತು, ಸುರೇಶ್ ಬೈಲು, ಯೋಗೀಶ್ ಶೆಟ್ಟಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಸಹ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕೋಶಾಧಿಕಾರಿ ನರಸಿಂಹ ಕುಲಕರ್ಣಿ, ಮಂಗಳೂರು ಶಾಖಾ ಮಠದ ಮ್ಯಾನೇಜರ್ ಸುಬ್ಬ ಕಾರಡ್ಕ ಉಪಸ್ಥಿ ತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top