ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ

ದಶಕಗಳ ಬಳಿಕ ಆರಂಭವಾದ ನಕ್ಸಲ್‌ ಚಟುವಟಿಕೆಗೆ ಆರಂಭದಲ್ಲೇ ಹೊಡೆತ ಕೊಟ್ಟ ಎನ್‌ಕೌಂಟರ್‌

ಕಾರ್ಕಳ: ನಕ್ಸಲ್ ನಿಗ್ರಹ ಪಡೆ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಇದರೊಂದಿಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಮತ್ತೊಮ್ಮೆ ಶುರುವಾಗಿದ್ದು ನಿಜ ಎನ್ನುವುದು ಸಾಬೀತಾಗಿದೆ.

ಹೆಬ್ರಿಯ ಕಬ್ಬಿನಾಲೆ ಸಮೀಪದ ಕಾಡಂಚಿನ ನಿವಾಸಿಯಾಗಿದ್ದ ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ನಕ್ಸಲ್ ಚಟುವಟಿಕೆಗಳ ಸಂಬಂಧ ವಿಕ್ರಂ ಗೌಡನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಸುಮಾರು 15 ವರ್ಷಗಳಿಂದ ಪೊಲೀಸರ ಕಣ್ಣುತಪ್ಪಿಸಿ ಓಡಾಡುತ್ತಿದ್ದ.































 
 

ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆತ ಬಳಿಕ ನಕ್ಸಲ್​ ಚಳವಳಿಗೆ ಧುಮುಕಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.

ಕೇರಳದಲ್ಲಿ ಕೂಡ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿತ್ತು. ಅದರ ಬೆನ್ನಲ್ಲೇ ಅಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯೂ ಚುರುಕಾಗಿತ್ತು. ನಂತರ ಅಲ್ಲಿಂದ ಕಾಲ್ಕಿತ್ತಿದ್ದ ನಕ್ಸಲರು, 2 ತಿಂಗಳುಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಕೆಲದಿನಗಳ ಹಿಂದೆ ಕಾರ್ಕಳದ ಈದು ಸಮೀಪ ಕಾಡಿನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಪೊಲೀಸರು ಮತ್ತು ನಕ್ಸಲ್‌ ನಿಗ್ರಹ ಪಡೆಯವರು ಇದನ್ನು ನಿರಾಕರಿಸಿದರೂ ಕೂಂಬಿಂಗ್‌ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಇದರ ಬೆನ್ನಿಗೆ ಕೊಪ್ಪದ ಮನೆಯೊಂದಕ್ಕೆ ನಕ್ಸಲರು ಭೇಟಿ ನೀಡಿದ ವಿಷಯ ಪತ್ತೆಯಾಗಿತ್ತು. ಅಲ್ಲಿನ ಮನೆಯೊಂದಕ್ಕೆ ಹೋಗಿ ಮನೆಯವರನ್ನು ಬೆದರಿಸಿ ಅಡುಗೆ ಮಾಡಿಸಿ ಊಟ ಮಾಡಿಕೊಂಡು ಹೋಗುವಾಗ ತಮ್ಮ ಮೂರು ಬಂದೂಕುಗಳನ್ನು ಮನೆಯಲ್ಲೇ ಬಿಟ್ಟಿದ್ದರು. ಇದು ನಕ್ಸಲರು ಮತ್ತೆ ಸಕ್ರಿಯರಾಗಿರುವುದನ್ನು ಸಾಬೀತುಪಡಿಸಿತ್ತು. ಬಳಿಕ ನಕ್ಸಲ್‌ ವಿರೋಧಿ ಕಾರ್ಯಾಚರಣೆಯೂ ಚುರುಕಾಗಿತ್ತು.

ಪಶ್ಚಿಮ ಘಟ್ಟ ಸಾಲಿನ ಗ್ರಾಮಗಳು ಹಾಗೂ ಚಿಕ್ಕಮಗಳೂರಿನ ಹಲವೆಡೆ ಇತ್ತೀಚೆಗೆ ನಕ್ಸಲರು ಸಭೆ ನಡೆಸಿದ್ದರು. ಕಸ್ತೂರಿ ರಂಗನ್​​ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ಸಂಬಂಧ ಸಭೆ ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ಜಿಲ್ಲೆಯ ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ನಕ್ಸಲ್ ನಿಗ್ರಹ ಪಡೆಯಿಂದ ಕಾರ್ಯಾಚರಣೆ ಕೂಡ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ಹುಟ್ಟಿಕೊಂಡಿದ್ದ ನಕ್ಸಲ್ ಚಳವಳಿ, ನಂತರ ಕರ್ನಾಟಕದ ವಿವಿಧ ಭಾಗಗಳಲ್ಲಿ ದಶಕಗಳ ಕಾಲ ಆತಂಕ ಸೃಷ್ಟಿ ಮಾಡಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ಹೆಚ್ಚಿನ ಬೆಂಬಲ‌ ಸಿಕ್ಕಿರಲಿಲ್ಲ. ಹೀಗಾಗಿ ಪಕ್ಕದ ರಾಜ್ಯ ಕೇರಳಕ್ಕೆ ನಕ್ಸಲರು ಸ್ಥಳಾಂತರಗೊಂಡಿದ್ದರು.

ಮತ್ತೆ ಕಸ್ತೂರಿ ರಂಗನ್​​ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ವಿಚಾರವಾಗಿ ಸರಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಕ್ಸಲರು ಕರಾವಳಿ ಭಾಗಕ್ಕೆ ಆಗಮಿಸಿ ನಕ್ಸಲರು ಸಭೆಗಳನ್ನು ನಡೆಸಿ ಚಟುವಟಿಕೆ ಆರಂಭಿಸಿ ಜನರನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿದ್ದರು. ವಿಕ್ರಂ ಗೌಡನ ಹತ್ಯೆ ಸದ್ಯಕ್ಕೆ ನಕ್ಸಲರಿಗೆ ದೊಡ್ಡ ಹೊಡೆತ ನೀಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top