ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್ ರದ್ದುಮಾಡಿ ಎಂದು ಸವಾಲು
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಕುರಿತು ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೊರಿಸಿದ್ದ ಶೇ.40ರಷ್ಟು ಕಮಿಷನ್ ಆರೋಪವನ್ನು ಲೋಕಾಯುಕ್ತ ಸಂಸ್ಥೆ ಸುಳ್ಳೆಂದು ಸಾಬೀತು ಮಾಡಿದೆ. ರಾಜ್ಯದ ಜನರಿಗೆ ಶೇ.40 ಪರ್ಸೆಂಟ್ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 100 ಪರ್ಸೆಂಟ್ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
18 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಇವತ್ತು ಅವರ ತೆರೆದ ಪುಸ್ತಕ ಪುಟಗಳು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ ಎಂದು ಟೀಕಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ಮೋದಿ ಪ್ರಸ್ತಾಪ ಮಾಡಿದ್ದಾರೆ. ಸಿದ್ದರಾಮಯ್ಯನವರು ಇದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಅದು ಪ್ರಧಾನಿ ಮೋದಿ ಅವರು ಮಾಡಿರುವ ಆರೋಪವಲ್ಲ. ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ. ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರವನ್ನು ಒಮ್ಮೆ ಮುಖ್ಯಮಂತ್ರಿಗಳು ತರಿಸಿಕೊಂಡು ಓದಬೇಕು. ಸಾಕ್ಷಿ ಬೇಕಾದರೆ ಸಿದ್ದರಾಮಯ್ಯನವರು ಮದ್ಯ ಮಾರಾಟಗಾರರ ಸಂಘದ ಆರೋಪದ ತನಿಖೆ ಮಾಡಲು ಮತ್ತೊಂದು ಎಸ್ಐಟಿ ರಚಿಸಲಿ ಎಂದು ಸವಾಲು ಹಾಕಿದರು.
ಒಂದು ವೇಳೆ ಮದ್ಯ ಮಾರಾಟಗಾರರು ಮಾಡುತ್ತಿರುವ ಆರೋಪ ಸುಳ್ಳಾದರೆ ಅವರ ಲೈಸೆನ್ಸ್ ರದ್ದು ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಿ. ತಮ್ಮ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.