ಹೊಸದಿಲ್ಲಿ : ನೈಜೀರಿಯಾ ಸರ್ಕಾರ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ. ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. ಆ ಮೂಲಕ ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಬಳಿಕ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೈಜೀರಿಯಾ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಾನು ಅದನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಭಾರತ ಮತ್ತು ನೈಜೀರಿಯಾದ ಸ್ನೇಹ ಹಾಗೂ ಭಾರತದ 140 ಕೋಟಿ ಜನರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತ ಮತ್ತು ನೈಜೀರಿಯಾ ತಮ್ಮದೇ ಆದ ಆರ್ಥಿಕ ಸಾಮರ್ಥ್ಯವನ್ನು ಹೊಂದಿವೆ. ನಾವು ಎರಡೂ ದೇಶಗಳ ಜನರ ಯೋಗಕ್ಷೇಮಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಆ ಮೂಲಕ ಭಾರತ ಮತ್ತು ನೈಜೀರಿಯಾ ನಡುವಿನ ಬಲವಾದ ಬಾಂಧವ್ಯವನ್ನು ಎತ್ತಿ ತೋರಿಸಿದ್ದಾರೆ.
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ವರ್ಧಿಸುವ ಕುರಿತು ಪ್ರಧಾನಿ ಮೋದಿ ಚರ್ಚೆ ಮಾಡಿದ್ದಾರೆ. ಕಾರ್ಯತಂತ್ರದ ವೇಗವನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ. ಅದೇ ರೀತಿಯಾಗಿ ರಕ್ಷಣೆ, ಇಂಧನ, ತಂತ್ರಜ್ಞಾನ, ವ್ಯಾಪಾರ, ಆರೋಗ್ಯ, ಶಿಕ್ಷಣ ಮತ್ತು ಹೆಚ್ಚಿನ ಕ್ಷೇತ್ರಗಳ ಅಭಿವೃದ್ಧಿ ಕುರಿತಾದ ಅಪಾರ ಅವಕಾಶಗಳ ಬಗ್ಗೆ ಕೂಡ ಪರಸ್ಪರ ಚರ್ಚೆ ಮಾಡಲಾಗಿದೆ.
17 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹಾಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ವರ್ಧಿಸುವ ಕುರಿತು ಚರ್ಚೆ ಮಾಡಲಾಗಿದೆ. ನ.21ರವರೆಗೆ ಮೂರು ದೇಶಗಳಾದ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಕೈಗೊಂಡಿದ್ದಾರೆ. ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದು, ಬಳಿಕ ಗಯಾನಾಗೆ ತೆರಳಲಿದ್ದಾರೆ.