ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಕನಕದಾಸ ಜಯಂತಿ ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ದಾಸ ಸಾಹಿತ್ಯದಲ್ಲಿ ಮೈಲಿಗಲ್ಲು ಸ್ಥಾಪಿಸಿದವರು. ಸಾಹಿತ್ಯವನ್ನು ಮುಂದಿಟ್ಟು ಕೀರ್ತನೆಗಳ ಮೂಲಕ ಜೀವನದಲ್ಲಿ ಮುಕ್ತಿ ಮಾರ್ಗವನ್ನು ಕಂಡುಕೊಂಡು ಸಮಾಜಕ್ಕೆ ಕೊಡುಗೆಗಳನ್ನು ನೀಡಿದವರು. ಸಮಾಜಕ್ಕೆ ಕೆಡುಕು ಮಾಡದೇ ಯಾವ ರೀತಿ ಬದುಕು ಸಾಗಿಸಬಹುದು ಎಂಬುದನ್ನು ತನ್ನ ಸಂದೇಶದ ಮೂಲಕ ಸಾರಿದರು. ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಿಕವಾಗಿ ಜಗದ ಪರಿವರ್ತನೆ ಸಾಧ್ಯ, ಜೀವನದಲ್ಲಿ ಸತ್ಯವಂತರೇ ಭಗವಂತನ ರೂಪ ಎಂದು ತಿಳಿಸಿದವರು. ಇಂತಹಾ ದಾಸರ ಜಯಂತಿ ಆಚರಣೆ ಅರ್ಥಪೂರ್ಣ. ಅವರ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮಾತನಾಡಿ, ಜೀವನ ಹಾಗೂ ಬೆಳವಣಿಗೆ ನಿಟ್ಟಿನಲ್ಲಿ ಸಮಾಜಕ್ಕೆ ಆದರ್ಶರಾದವರು ಕನಕದಾಸರು. ಎಲ್ಲಾ ಜಾತಿ-ಮತ-ಪಂಥಗಳೆನ್ನದೆ ಒಗ್ಗಟ್ಟಿನಿಂದ ಇರಬೇಕಾದ್ದು ಮನುಷ್ಯನ ಕರ್ತವ್ಯ ಎಂದು ಸಾರಿದವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದರು.
ಉಪತಹಸೀಲ್ದಾರ್ ರವಿ ಕುಮಾರ್ ಕನಕದಾಸರ ಕೀರ್ತನೆ ಹಾಡಿದರು. ವೇದಿಕೆಯಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.