ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ

ಮಂಗಳೂರು : ಕರಾವಳಿ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ ನೇತಾಡಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) ಅಡಿಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿ ಅಡಿಕೆ ಬಳಕೆ ಮೇಲೆ ನಿಯಂತ್ರಣ ಹೇರಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಆತಂಕ ಮೂಡಿದೆ.

ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) 2024 ಅಕ್ಟೋಬರ್‌ 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆಯಲ್ಲಿ ಬಾಯಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಇದೆ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್‌ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್‌ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್‌ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್‌ಸಿಯ ವರದಿಗಳಲ್ಲೂ ಅಡಿಕೆ ಕ್ಯಾನ್ಸರ್‌ಕಾರಕ ಎಂದೇ ಉಲ್ಲೇಖವಾಗಿದ್ದರೂ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಐಎಆರ್‌ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಿಕೆ ಮಾತ್ರವಲ್ಲ, ನೇರವಾಗಿ ಅಡಿಕೆ ಬೆಳೆಯನ್ನೇ ನಿಯಂತ್ರಿಸುವ ಪ್ರಸ್ತಾಪವಿದೆ. ಹೊಗೆ ರಹಿತ ತಂಬಾಕು(ಜಗಿದು ಉಗುಳುವ) ಮತ್ತು ಅಡಿಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್‌ ತಡೆಯಬಹುದು ಎಂಬ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕವಾಗಿ ಹೊಗೆ ರಹಿತ ತಂಬಾಕಿನಿಂದ ಉಂಟಾಗಿರುವ 1,20,200 ಬಾಯಿ ಕ್ಯಾನ್ಸರ್‌ ಪ್ರಕರಣಗಳಲ್ಲಿ 83,400 ಪ್ರಕರಣ ಭಾರತದಲ್ಲೇ ದಾಖಲಾಗಿದೆ. 2022ರಲ್ಲಿ ಈ ಅಧ್ಯಯನ ನಡೆಸಿದ್ದು, ಬಹುತೇಕ ಅಧ್ಯಯನ ಉತ್ತರ ಭಾರತದಲ್ಲೇ ನಡೆದಿರುವುದು ಗಮನಾರ್ಹ. ಜಾಗತಿಕವಾಗಿ 300 ಮಿಲಿಯನ್‌ ಮಂದಿ ಹೊಗೆರಹಿತ ತಂಬಾಕು ದಾಸರಾಗಿದ್ದು, 600 ಮಿಲಿಯನ್‌ ಮಂದಿ ಅಡಿಕೆ ಬಳಸುತ್ತಾರೆ. ದಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರ ಹೆಚ್ಚಿನ ದೇಶಗಳಲ್ಲಿ ಅಡಿಕೆ ಬಳಕೆಯಲ್ಲಿದೆ. ಹೊಗೆ ರಹಿತ ತಂಬಾಕು ಮತ್ತು ಅಡಿಕೆ ಉತ್ಪನ್ನಗಳು ಗ್ರಾಹಕರಿಗೆ ವಿವಿಧ ರೂಪದಲ್ಲಿ ಲಭ್ಯವಿರುತ್ತವೆ. ತಂಬಾಕು, ಗುಟ್ಕಾ ಹಾಗೂ ಅಡಿಕೆಯಂಥ ಹೊಗೆರಹಿತ ತಂಬಾಕು ಉತ್ಪನ್ನಗಳ ಹೆಚ್ಚಿನ ಬಳಕೆಯಿಂದ ಏಷ್ಯಾದ ದೇಶಗಳಲ್ಲಿ ಭಾರತ ಅತಿಹೆಚ್ಚು ಬಾಯಿ ಕ್ಯಾನ್ಸರ್‌ ಪ್ರಕರಣ ಹೊಂದಿದೆ ಎಂದು ಕ್ಯಾನ್ಸರ್‌ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್‌ ರುಮ್ಗೆ ಎಂಬವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.







































 
 

ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. 1998ರಿಂದಲೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಅಡಿಕೆ ಹಾನಿಕಾರಕ ಎಂದೇ ಉಲ್ಲೇಖಿಸಲಾಗುತ್ತಿದೆ. ಅಡಿಕೆ ಆರೋಗ್ಯದಾಯಕ, ಸಾಂಪ್ರದಾಯಿಕವಾಗಿಯೂ ಅಡಿಕೆ ಬಳಸುತ್ತಾರೆ. ಮೌಲ್ಯವರ್ಧಿತ ಉತ್ಪನ್ನವಾಗಿಯೂ ಉಪಯೋಗಿಸುತ್ತಾರೆ ಎಂಬುದನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ. ಇದರ ಜತೆಗೆ ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಮಾರುಕಟ್ಟೆ ಅಧ್ಯಯನ ವರದಿಗಳೂ ಅಭಿಪ್ರಾಯ ಮಂಡಿಸಲಾಗಿದೆ.

ಕರಾವಳಿಯ ಆಚರಣೆಗಳಲ್ಲೂ ಅಡಿಕೆಗೆ ಮಹತ್ವದ ಸ್ಥಾನ ಇದೆ. ಉಡುಪಿ, ದ.ಕ.ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಇಲ್ಲಿನ ಆರ್ಥಿಕ ವ್ಯವಹಾರಗಳಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ಪದೇಪದೆ ಅಡಿಕೆ ಕುರಿತು ಪ್ರಕಟವಾಗುತ್ತಿರುವ ಭೀತಿ ಹುಟ್ಟಿಸುವ ವರದಿಗಳು ಮತ್ತು ಹೇಳಿಕೆಗಳು ಬೆಲೆಯ ಮೇಲೆ ಪರಿಣಾಮ ಬೀರಿ ಅಡಿಕೆ ಬೆಳೆಗಾಗರರು ಆತಂಕ ಎದುರಿಬೇಕಾಗುತ್ತದೆ. ಹಲವು ಸಲ ಸಂಸತ್ತಿನಲ್ಲೂ ಅಡಿಕೆ ಹಾನಿಕಾರಕ ಎಂದು ಉಲ್ಲೇಖಿಸಲಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top