ಭುವನೇಶ್ವರ:ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ರೂ.ಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಒಡಿಶಾದ ಬಾಲಾಸೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಹೈದರಾಬಾದ್ ಮತ್ತು ಒಡಿಶಾ ಪೊಲೀಸ್ ತಂಡ ದಾಳಿ ನಡೆಸಿ ಕಮರ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ಬಡಮಂಡರುಣಿ ಗ್ರಾಮದಲ್ಲಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಪಾಲ್ ಎಂಬಾತ ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ಲಾಕರ್‌ನಿಂದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿದ್ದ. ಬಳಿಕ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಹಣವನ್ನು ಗ್ರಾಮಕ್ಕೆ ಕಳುಹಿಸಿದ್ದ. ಹೈದರಾಬಾದ್ ಪೊಲೀಸರ ತಂಡ ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಮನೆಯ ಮೇಲೆ ದಾಳಿ ನಡೆಸಿ ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ. ಹಣ ಕದ್ದ ಬಳಿಕ ಗೋಪಾಲ್ ಹಾಗೂ ರವೀಂದ್ರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಆರೋಪಿಯ ಕುಟುಂಬದ ಸದಸ್ಯರೊಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.