ಕಸ್ತೂರಿ ರಂಗನ್‌ ವರದಿ ಆತಂಕ ಬೇಡ : ಸಂಸದ ಕೋಟ ಭರವಸೆ

ವರದಿ ತಿರಸ್ಕರಿಸಲು ಸರಕಾರ ನಿರ್ಧಾರ

ಉಡುಪಿ : ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಹೀಗಾಗಿ ಕಾಡಿನಂಚಿನ ಜನರು ಕಸ್ತೂರಿ ರಂಗನ್‌ ವರದಿ ಬಗ್ಗೆ ವಿನಾ ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಡಾ.ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಆತಂಕ ಬೇಡ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.































 
 

ಜಿಲ್ಲಾಧಿಕಾರಿ ಕಾರ್ಯಾಲಯ ರಜತಾದ್ರಿಯಲ್ಲಿ ಪರಸರ ಸೂಕ್ಷ್ಮ ಪ್ರದೇಶ ಮತ್ತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಅರಣ್ಯ ಕಾಯ್ದೆಗಳು ಅರಣ್ಯ ಇಲಾಖೆಯ ನೀತಿ ನಿಯಮಗಳಿಂದ ನಿರಂತರ ತೊಂದರೆಗೊಳಗಾಗುತ್ತಿರುವ ಕಾಡಂಚಿನ ಭಾಗದ ನಿವಾಸಿಗಳಿಗೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ ವಿದ್ಯುತ್, ರಸ್ತೆ, ಸೇತುವೆ, ಕುಡಿಯುವ ನೀರು, ಜನವಸತಿ ಪ್ರದೇಶ, ವಸತಿ ಪ್ರದೇಶ, ಮನೆಗಳ ನಿರ್ಮಾಣ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳಿಗೆ ಕುತ್ತು ಬಂದು ಭವಿಷ್ಯದಲ್ಲಿ ಜೀವನೋಪಾಯಕ್ಕೆ ಅನನುಕೂಲ ಉಂಟಾಗಬಹುದೆಂಬ ಆತಂಕವಿರುವುದು ಸಹಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಬಗ್ಗೆ ಡಾ.ಕೆ.ಕಸ್ತೂರಿ ರಂಗನ್ ವರದಿ ಆಧಾರಿಸಿದ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧಾರಿಸಿ, ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಈಗಾಗಲೇ ಆರು ಬಾರಿ ಅಧಿಸೂಚನೆ ಹೊರಡಿಸಿದೆ. ಆದರೆ ಈವರೆಗೂ ಅದು ಜಾರಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಜಾರಿ ಮಾಡಲು ಮುಂದಾಗಬಹುದು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಸ್ಥಳೀಯವಾಗಿ ವಾಸಿಸುವ ಜನರ ಆಕ್ಷೇಪಣೆಗಳು, ಅವರಿಗೆ ಆಗುವ ಅನನುಕೂಲಗಳನ್ನು ಮೇಲ್ಮಟ್ಟದಲ್ಲಿ ತಿಳಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದರು.

ಪ್ರಸ್ತುತ ಜಾರಿಯಲ್ಲಿರುವ ಪರಿಸರ ಸೂಕ್ಷ್ಮ ವಲಯ (ಇಕೋ ಸೆನ್ಸಿಟಿವ್ ಝೋನ್) ಪ್ರಕಾರ ಕಾಡಂಚಿನ ಸುರಕ್ಷಿತ ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಅಭಯಾರಣ್ಯ ಪ್ರದೇಶ ವ್ಯಾಪ್ತಿಯಿಂದ ಒಂದು ಕಿ.ಮೀ ವ್ಯಾಪ್ತಿಯ ಬಫರ್ ಝೋನ್‌ಗಳಲ್ಲಿ ಜನರು ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಇಕೋ ಸೆನ್ಸಿಟೀವ್ ಝೋನ್‌ನ ಮಾನಿಟರಿಂಗ್ ಕಮಿಟಿಯ ಪೂರ್ವಾನುಮತಿ ಪಡೆಯುವ ಅವಶ್ಯಕತೆ ಇದ್ದು, ಇದರಿಂದ ಜನರ ದೈನಂದಿನ ಜೀವನಗಳ ಆಗುಹೋಗುಗಳಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಸ್ಥಳೀಯವಾಗಿ ಅನುಮತಿ ನೀಡುವ ಕೆಲವೊಂದು ತಿದ್ದುಪಡಿಗಳು ಆಗಬೇಕಿದೆ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top