ಪುತ್ತೂರು: ಸಮಾಜ ಸೇವಕರಾಗಿ, ಹಿರಿಯರ ನೆಲೆಯಲ್ಲಿ ಜಿ.ಎಲ್.ಆಾಚಾರ್ಯ ಅವರು ಸಮಾಜಕ್ಕೆ ಸ್ಪೂರ್ತಿಯಾಗಿದ್ದರು. ಅವರ ಕುರಿತು ಮುಂದಿನ ಪೀಳಿಗೆಯ ಸಮಾಜಕ್ಕೆ ತಿಳಿಯಬೇಕು. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ರಚನೆಯಾಗಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಭಾನುವಾರ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜಿ.ಎಲ್.ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಜಂಟಿ ಆಾಶ್ರಯದಲ್ಲಿ ಜಿ.ಎಲ್.ಆಚಾರ್ಯ ಸಂಸ್ಮರಣಾ ಕಾರ್ಯಕ್ರಮವನ್ನು ಬೈಪಾಸ್‍ರಸ್ತೆಯಲ್ಲಿರುವ ಆಶ್ಮಿ ಕಂಫರ್ಟ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಿ.ಎಲ್.ಆಚಾರ್ಯ ಬದುಕಿನುದ್ದಕ್ಕೂ ಯಾವುದೇ ಪ್ರಚಾರವಿಲ್ಲದೆ ಸಮಾಜಕ್ಕೆ ಕೊಡುಗೈ ದಾನಿಯಾಗಿದ್ದರು.ಅವರ ಪ್ರೇರಣೆಯಿಂದ ಸಮಾಜ ಪ್ರಕಾಶಮಾನವಾಗಲಿ ಎಂದು ಹಾರೈಸಿದರು.
ಜಿ.ಎಲ್.ಆಚಾರ್ಯ ಶತಮಾನೋತ್ಸವದ ಲಾಂಛನ ಬಿಡುಗಡೆ ಮಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ ಮಾತನಾಡಿ, ಜಿ.ಎಲ್.ಆಚಾರ್ಯ ಅವರು ಉದ್ಯಮದ ಜತೆ ಸಮಾಜದ ಏಳಿಗೆಯ ಹಂಬಲದಿಂದ ಬದುಕಿದವರು. ನೂರಾರು ಜನರಿಗೆ ಬದುಕು ಕಟ್ಟಿಕೊಟ್ಟವರು. ಜತೆಗೆ ಎಲ್ಲಾ ರಂಗಗಳಲ್ಲೂ ತನ್ನನ್ನು ತೊಡಗಿಕೊಂಡವರು. ಸಂಸ್ಕೃತಿಯ ಚೌಕಟ್ಟು ಮೀರಿ ಬದುಕು ನಡೆಸಿದವರಲ್ಲ. ಅದನ್ನು ಪ್ರಸ್ತುತ ಅವರ ಕುಟುಂಬ ಅನುಸರಿಸುತ್ತಿದೆ. ಎಲ್ಲರ ಕುಟುಂಬವೂ ಅವರಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಹಿರಿಯ ಸಾಹಿತಿಗಳಾದ ಪ್ರೊ.ವಿ.ಬಿ.ಅರ್ತಿಕಜೆ, ಡಾ.ವಸಂತ ಕುಮಾರ್ ತಾಳ್ತಜೆ ಅವರಿಗೆ ಅಭಿವಂದನೆ ನಡೆಯಿತು. ಹರಿಣಿ ಪುತ್ತೂರಾಯ, ಆಶಾ ಬೆಳ್ಳಾರೆ, ವಿಜಯ ಕುಮಾರ್ ಮೊಳೆಯಾರ ಸನ್ಮಾನಿತರ ಪರಿಚಯ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್‍ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‍ರಾವ್ ಉಪಸ್ಥಿತರಿದ್ದರು.
ಮೆ.ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಧೈರ್ಯದೊಂದಿಗೆ ಹೊಸತನ ಬೇಕು ಎಂದು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದವರು ಜಿ.ಎಲ್.ಆಚಾರ್ಯ. ಬದುಕಿನುದ್ದಕ್ಕೂ ನಾನಾ ಸಂಘಟನೆಗಳಲ್ಲಿ ಕೆಲಸ ಮಾಡಿದವರು. ಅವರು ನಮಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಎಲ್.ಆಚಾರ್ಯ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.