ಸದ್ದಿಲ್ಲದೆ 11 ಲಕ್ಷ ಕಾರ್ಡ್ ರದ್ದು ಎಂದು ಸುನಿಲ್ ಆರೋಪ
ಬೆಂಗಳೂರು: ಮಹಿಳೆಯರ ಖಾತೆಗೆ ನೇರವಾಗಿ ತಿಂಗಳಿಗೆ 2 ಸಾವಿರ ರೂ. ಹಣ ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯಿಂದ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನೇ ಕಡಿಮೆ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 11 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಗ್ಯಾರಂಟಿಗಳಿಗೆ ಹಣ ಹೊಂದಾಣಿಕೆ ಮಾಡಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರಕಾರ ಈಗ ನೇರವಾಗಿ ಬಡವರ ಹೊಟ್ಟೆಗೆ ಹೊಡೆಯಲು ಮುಂದಾಗಿದೆ. ಸದ್ದಿಲ್ಲದೆ ರೇಶನ್ ಕಾರ್ಡ್‌ಗಳು ರದ್ದಾಗುತ್ತಿವೆ. ಜನರಿಗೆ ಈ ಬಗ್ಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ರೇಶನ್ ಅಂಗಡಿಗೆ ಹೋದಾಗಲೇ ಹೆಚ್ಚಿನವರಿಗೆ ರೇಶನ್ ಕಾರ್ಡ್ ರದ್ದಾಗಿರುವುದು ಗೊತ್ತಾಗಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಬಿಪಿಎಲ್ ಕಾರ್ಡ್ ಜೊತೆಗೆ ರಾಜ್ಯದಲ್ಲಿ ಎಪಿಎಲ್ ಕಾರ್ಡ್ ಕೂಡ ರದ್ದಾಗುತ್ತಿದೆ ಎನ್ನಲಾಗಿದೆ. ಆಹಾರ ಇಲಾಖೆ ಆಧಾರ್ ಜೋಡಣೆಯಾಗದ ನೆಪವೊಡ್ಡಿ ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಇದರಿಂದ ಜನರಿಗೆ ಇನ್ನಿತರ ಕೆಲಸಗಳಿಗೆ ದಾಖಲೆಪತ್ರಗಳನ್ನು ಒದಗಿಸಲು ಸಮಸ್ಯೆಯಾಗಲಿದೆ ಎನ್ನಲಾಗಿದೆ. ಕೆಲವು ಎಪಿಎಲ್ ಕಾರ್ಡ್‌ಗಳನ್ನು ತೆರಿಗೆ ಪಾವತಿದಾರರು ಎಂಬ ನೆಲೆಯಲ್ಲಿ ಸದ್ದಿಲ್ಲದೆ ಎಪಿಎಲ್ ಆಗಿ ಪರಿವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
1,20,000 ರೂ.ಗಿಂತ ಹೆಚ್ಚಿನ ಆದಾಯ ಕಾರಣದಿಂದ ಸಾವಿರಾರು ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ ಇನ್ನೊಂದಷ್ಟು ಕಾರ್ಡ್‌ಗಳು ಬದಲಾವಣೆಯಾಗಿವೆ. ಸಾವಿರಾರು ಕಾರ್ಡ್‌ಗಳು ವಿವಿಧ ತಾಂತ್ರಿಕ ಕಾರಣದಿಂದ ಅಮಾನತು ಮಾಡಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಪಿಎಲ್, ಎಪಿಎಲ್ ರದ್ದಾಗಿಲ್ಲ-ಮುನಿಯಪ್ಪ ಸ್ಪಷ್ಟನೆ
ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅಲ್ಲದೇ ಇರುವವರನ್ನು ಎಪಿಎಲ್ ಮಾಡಿದ್ದೇವೆ. ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್ ಮುನಿಯಪ್ಪ ನಿನ್ನೆ ಮಂಗಳೂರಿನಲ್ಲಿ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿದೆ ಎಂಬ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪಡಿತರ ನೀಡುವುದಕ್ಕೆ ಹಣದ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಎಪಿಎಲ್ನವರಿಗೆ ಸಬ್ಸಿಡಿ ರೇಟ್ನಲ್ಲಿ ಆಹಾರ ಧಾನ್ಯ ಕೊಡುತ್ತಿದ್ದರೂ ಹೆಚ್ಚಿನವರು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಸದ್ಯಕ್ಕೆ ಎಪಿಎಲ್ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದೇವೆ. ಪರಿಷ್ಕರಣೆ ಪೂರ್ತಿ ಆದ ಮೇಲೆ ಎಪಿಎಲ್ನವರು ಪಡಿತರ ಬೇಕೆಂದು ಮುಂದೆ ಬಂದರೆ ಖಂಡಿತಾ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಒಂದೇ ಒಂದು ಎಪಿಎಲ್ ಕಾರ್ಡ್ ರದ್ದು ಆಗಿಲ್ಲ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕಾರ್ಡ್ ಕರ್ನಾಟಕದಲ್ಲಿ ಇದೆ. 6.50 ಕೋಟಿ ಜನ ಇದ್ದರೂ 4.50 ಕೋಟಿ ಜನರಿಗೆ ಕಾರ್ಡ್ ಕೊಟ್ಟಿದ್ದೇವೆ. ಅರ್ಹರಲ್ಲದವರು ಜಾಸ್ತಿ ಜನ ಇದ್ದಾರೆ ಎಂಬ ಭಾವನೆ ಬಂದಿದೆ. ಸುನಿಲ್ ಕುಮಾರ್ ನನ್ನ ಬಳಿ ಕೇಳಿದರೆ ವಿವರ ಕೊಡುತ್ತೇನೆ. ಪರಿಷ್ಕರಣೆಗೆ ನಿಯಾಮವಳಿ ಹಾಕಿಕೊಂಡಿದ್ದೇವೆ. ಈ ಹಿಂದಿನ ಸರ್ಕಾರವೇ ಈ ನಿಯಮ ಮಾಡಿದೆ. ಆದಾಯ ತೆರಿಗೆ ಕಟ್ಟುವವರಿಗೆ, ಕಾರು ಇರುವವರನ್ನು ಎಪಿಎಲ್ಗೆ ಹಾಕುತ್ತೇವೆ. ಅವರನ್ನು ತೆಗೆದು ಹಾಕಲ್ಲ. ಪರಿಷ್ಕರಣೆ ಮಾಡುವಾಗ ಅರ್ಹರಿಗೆ ಬಿಪಿಎಲ್ ಕೊಡುತ್ತೇವೆ. ನಮ್ಮ ಬಳಿ ಇದಕ್ಕಾಗಿ 8,000 ಕೋಟಿ ಹಣ ರೂ. ಇದೆ. ತಿಂಗಳಿಗೆ 650 ಕೋಟಿ ಖರ್ಚು ಆಗಲ್ಲ. ಸುನೀಲ್ ಕುಮಾರ್ ಅವರಿಗೆ ಮನವರಿಕೆ ಮಾಡುತ್ತೇವೆ. ನನ್ನ ಬಳಿ ಕೇಳಿದರೆ ಹೇಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.