ಟಿ-20 ಸರಣಿ : ಟೀಮ್‌ ಇಂಡಿಯಾ ಎದುರು ಸೋತು ಸುಣ್ಣವಾದ ದಕ್ಷಿಣ ಆಫ್ರಿಕ

ಅತ್ಯಧಿಕ ರನ್, ಹೀನಾಯ ಸೋಲು… ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ

ಜೋಹಾನ್ಸ್​ಬರ್ಗ್ : ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಟಿ-20 ಸರಣಿಯ ನಾಲ್ಕನೇ ತಥಾ ಕೊನೆಯ ಪಂದ್ಯದಲ್ಲಿ ದಾಖಲೆ ರನ್‌ ಗಳಿಸಿ, ದಾಖಲೆ ಅಂತರದಿಂದ ದಕ್ಷಿಣ ಆಫ್ರಿಕವನ್ನು ಸೋಲಿಸುವ ಮೂಲಕ ಭಾರತ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಬೀಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಟೀಮ್ ಇಂಡಿಯಾ 135 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 4 ಪಂದ್ಯಗಳ ಟಿ-20 ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆದ್ದುಕೊಂಡಿದೆ.
ಟಿ-20 ಕ್ರಿಕೆಟ್​ನ ಬಲಿಷ್ಠ ಪಡೆ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಸೌತ್ ಆಫ್ರಿಕಾದಲ್ಲೇ ಮಕಾಡೆ ಮಲಗಿಸಿದೆ. ಅದು ಕೂಡ ಅತ್ಯಧಿಕ ರನ್ ಕಲೆಹಾಕಿ, ಅತ್ಯಂತ ಹೀನಾಯವಾಗಿ ಸೋಲಿಸುವ ಮೂಲಕ ಎಂಬುದು ವಿಶೇಷ.
ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾಗೆ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 73 ರನ್‌ಗಳ ಜೊತೆಯಾಟವಾಡಿ ಅಭಿಷೇಕ್ ಶರ್ಮಾ (36) ಔಟಾದರು. ಆ ಬಳಿಕ ಶುರುವಾಗಿದ್ದೇ ಸ್ಯಾಮ್ಸನ್ – ತಿಲಕ್ ವರ್ಮಾ ಅಬ್ಬರ. ಈ ಜೋಡಿ 2ನೇ ವಿಕೆಟ್‌ಗೆ 210 ರನ್​ಗಳ ಜೊತೆಯಾಟವಾಡಿತು.
ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 106 ರನ್ ಬಾರಿಸಿದರೆ, ತಿಲಕ್ ವರ್ಮಾ 47 ಎಸೆತಗಳಲ್ಲಿ ಅಜೇಯ 120 ರನ್ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟದೊಂದಿಗೆ 283 ರನ್ ಕಲೆಹಾಕಿತು.

ಈ 283 ರನ್​ಗಳೊಂದಿಗೆ ಸೌತ್ ಆಫ್ರಿಕಾದಲ್ಲಿ ಟಿ-20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್​ನಲ್ಲಿ ಜೋಹಾನ್ಸ್​ಬರ್ಗ್​ನಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 260 ರನ್ ಬಾರಿಸಿ ಈ ದಾಖಲೆ ನಿರ್ಮಿಸಿತ್ತು. ಈಗ 283 ರನ್ ಸಿಡಿಸಿ ಟೀಮ್ ಇಂಡಿಯಾ ಸೌತ್ ಆಫ್ರಿಕಾದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಟೀಮ್ ಇಂಡಿಯಾ ನೀಡಿದ 283 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 18.2 ಓವರ್​ಗಳಲ್ಲಿ 148 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು 135 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.
ವಿಶೇಷ ಎಂದರೆ ತವರು ನೆಲದಲ್ಲಿ ದಕ್ಷಿಣ ದಫ್ರಿಕ ತಂಡದ ಅತ್ಯಂತ ಹೀನಾಯ ಸೋಲು. ಇದಕ್ಕೂ ಮುನ್ನ 2023ರಲ್ಲಿ ಡರ್ಬನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 111 ರನ್​ಗಳಿಗೆ ಪರಾಜಯಗೊಂಡಿದ್ದು ಅತ್ಯಂತ ಹೀನಾಯ ಸೋಲಾಗಿತ್ತು. ಇದೀಗ ಭಾರತದ ವಿರುದ್ಧ 135 ರನ್​ಗಳಿಂದ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಜೋಹಾರ್ನ್ಸ್​ಬರ್ಗ್​ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದ ಮೂಲಕ ಸೌತ್ ಆಫ್ರಿಕಾ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ. ಅದರ ಜೊತೆಗೆ ತವರಿನಲ್ಲಿ ಸೌತ್ ಆಫ್ರಿಕಾ ತಂಡವನ್ನು ಅತ್ಯಂತ ಹೀನಾಯವಾಗಿ ಸೋಲಿಸಿದ ಹಿರಿಮೆ ಕೂಡ ಭಾರತ ತಂಡದ ಪಾಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top