ತಿರುವನಂತಪುರ: ಗೂಗಲ್ ಮ್ಯಾಪ್ ನಂಬಿ ಹೋಗಿ ಮಿನಿ ಬಸ್ ಅಪಘಾತಕ್ಕೀಡಾಗಿ ಇಬ್ಬರು ರಂಗ ಕಲಾವಿದರು ದಾರುಣವಾಗಿ ಮೃತ್ಯುವಿಡಾಗಿರುವ ಘಟನೆ ಕೇರಳದಲ್ಲಿ ನಿನ್ನೆ ಸಂಭವಿಸಿದೆ. ಕಣ್ಣೂರು ಸಮೀಪದ ಕೆಲಕಮ್ ಬಳಿ ನಿನ್ನೆ ಈ ಅಪಘಾತ ಸಂಭವಿಸಿದೆ. ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾವನ್ನಪ್ಪಿರುವ ದುರ್ದೈವಿಗಳು.
ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ಗೂಗಲ್ ಮ್ಯಾಪ್ ಎಲ್ಲೆಲ್ಲೋ ಕರೆದುಕೊಂಡು ಹೋಗಿ ಇಕ್ಕಟ್ಟಿನ ಮಾರ್ಗಕ್ಕೆ ತಲುಪಿಸಿದೆ. ಮಾರ್ಗ ಕಡಿದಾಗಿದ್ದರಿಂದ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಮಾಡಿದರು.
‘ಕಾಯಂಕುಮಂ ದೇವ ಕಮ್ಯೂನಿಕೇಷ’ನ್ ರಂಗಭೂಮಿ ತಂಡ ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮಿನಿ ಬಸ್ನಲ್ಲಿ ವಯನಾಡ್ನ ಸುಲ್ತಾನ್ ಬತ್ತೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ತಿರುಗಳಿಂದಾಗಿ ಮಿನಿ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.