ಖುದ್ದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ತನಿಖಾಧಿಕಾರಿಯಿಂದ ನೋಟಿಸ್
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿ.3ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸಚಿವ ಜಮೀರ್ ಅಹ್ಮದ್ ಖಾನ್ಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಮೀರ್ ಮನೆಗೆ ಹೋಗಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸಚಿವರಿಗೆ ನೋಟಿಸ್ ನೀಡಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು. ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರಿದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ಹಂತದ ತನಿಖೆ ಮುಗಿಸಿದ ಪೊಲೀಸರು, ಈಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಇದರೊಂದಿಗೆ ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಮೀರ್ ಅವರಿಗೆ ಮತ್ತೆ ಪೊಲೀಸರ ತನಿಖೆ ಸಂಕಷ್ಟ ಮುಂದುವರಿದಿದ್ದು, ತಮ್ಮ ಹಣಕಾಸು ವ್ಯವಹಾರದ ಕುರಿತು ಲೆಕ್ಕವನ್ನು ಲೋಕಾಯುಕ್ತಕ್ಕೆ ಸಚಿವರು ಸಲ್ಲಿಸಬೇಕಿದೆ. ತಮ್ಮ ಮೇಲಿನ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಸಚಿವರಿಗೆ ಕಾಲಾವಕಾಶ ನೀಡಲಾಗಿದೆ.