ವಿಚಾರಣೆ ವೇಳೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟ ಮುಡಾ ಅಧಿಕಾರಿಗಳು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಆರೋಪಿಯಾಗಿರುವ ಮುಡಾ ಹಗರಣ ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಗೋಚರಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮುಡಾದ ಅಧಿಕಾರಿಗಳು ಸೈಟ್ ನೀಡಲು ತಮ್ಮ ಮೇಲೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟಿದ್ದು, ಈ ಪೈಕಿ ಇಬ್ಬರು ಸಚಿವರೂ ಇದ್ದಾರೆ ಎನ್ನಲಾಗುತ್ತಿದೆ.
ಇ.ಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡುವಾಗ ಇಬ್ಬರು ಸಚಿವರು ಪ್ರಭಾವ ಬೀರಿದ್ದಾರೆ. ಪ್ರಮುಖ ಸಚಿವರಿಂದಲೇ ಅಕ್ರಮ ನಡೆದಿದೆ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮುಡಾ ಮಾಜಿ ಅಧಿಕಾರಿಗಳ ಹೇಳಿಕೆಯನ್ನು ಬೆನ್ನತ್ತಿರುವ ಇ.ಡಿ ಈಗ ದಾಖಲೆ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಒಂದು ವೇಳೆ ಅಧಿಕಾರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಿಕ್ಕಿದರೆ ಇ.ಡಿ ಇಬ್ಬರು ಸಚಿವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಮುಡಾ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲಿರುವ ಕಾನೂನು ತಂಡದ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.